
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:
ಸುಪ್ರೀಂ ಕೋರ್ಟ್ ಕಲ್ಲು ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ, ಬೆಂಗಳೂರು ದಕ್ಷಿಣ ತಾಲೂಕಿನ ವಿಟ್ಟಸಂದ್ರ ಗ್ರಾಮದ ಹಳೆಯ ಕಲ್ಲು ಕ್ವಾರಿಯಲ್ಲಿ ಅವ್ಯಾಹತವಾಗಿ ಕಸ ಡಂಪಿಂಗ್ ಮುಂದುವರಿದಿದೆ. ಕ್ವಾರಿಯಲ್ಲಿ ಸುರಿದಿರುವ ಕಸದ ರಾಶಿಗೆ ನಿತ್ಯ ಬೆಂಕಿ ಹಚ್ಚುತ್ತಿರುವುದರಿಂದ ಏಳುತ್ತಿರುವ ದಟ್ಟ ಹೊಗೆ ಹಾಗೂ ಭೀಕರ ದುರ್ವಾಸನೆಗೆ ಸುತ್ತಮುತ್ತಲಿನ ಹಳ್ಳಿಗಳ ಜನರು ಹೈರಾಣಾಗಿದ್ದಾರೆ. ಕಸ ಕೊಳೆತು ನಾರುತ್ತಿರುವುದು ಹಾಗೂ ಪ್ರತಿದಿನ ಹೊಗೆ ಆವರಿಸುತ್ತಿರುವುದರಿಂದ ಸ್ಥಳೀಯ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ.
ಈ ವಿಷಪೂರಿತ ಹೊಗೆಯಿಂದಾಗಿ ವಯೋವೃದ್ಧರು ಮತ್ತು ಮಕ್ಕಳಿಗೆ ತೀವ್ರ ಉಸಿರಾಟದ ತೊಂದರೆ ಕಾಡುತ್ತಿದ್ದು, ಅಸ್ತಮಾ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುವಂತಾಗಿದೆ. ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಈ ಅಕ್ರಮ ಚಟುವಟಿಕೆ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ವಾರಿಯಲ್ಲಿ ಕಸ ಸುರಿಯುವುದನ್ನು ತಡೆಯಬೇಕು ಹಾಗೂ ಕಸದ ಹಾವಳಿಯಿಂದ ಮುಕ್ತಿ ಕೊಡಿಸಿ ನೆಮ್ಮದಿಯ ಬದುಕು ಕಲ್ಪಿಸಿಕೊಡಬೇಕು ಎಂದು ವಿಟ್ಟಸಂದ್ರ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / NAVEEN PARADESHII