
ವಾಷಿಂಗ್ಟನ್, ಜುಲೈ 22(ಹಿ.ಸ)
ಆ್ಯಂಕರ್:ಪ್ರಸ್ತುತ ಹಾಗೂ ಭವಿಷ್ಯದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಮೆರಿಕದ ಸಶಸ್ತ್ರ ಪಡೆಗಳಿಗೆ ಹೆಚ್ಚುವರಿ 1.5 ಟ್ರಿಲಿಯನ್ ಅಮೆರಿಕನ್ ಡಾಲರ್ (ಸುಮಾರು 130 ಲಕ್ಷ ಕೋಟಿ ರೂಪಾಯಿ) ಅಗತ್ಯವಿದೆ ಎಂದು ಅಮೆರಿಕದ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡ್ಯಾನ್ ಕೇನ್ ಹೇಳಿದ್ದಾರೆ.
ಅಮೆರಿಕ ಸೆನೆಟ್‌ನ ಅನುದಾನ ಸಮಿತಿಯ ಮುಂದೆ ಸಾಕ್ಷ್ಯ ನೀಡಿದ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಹೆಚ್ಚುವರಿ ರಕ್ಷಣಾ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಭವಿಷ್ಯದ ಯುದ್ಧ ಸನ್ನದ್ಧತೆ, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಹೂಡಿಕೆ, ಸೈನಿಕ ಸಾಮರ್ಥ್ಯ ವೃದ್ಧಿ ಹಾಗೂ ಪ್ರತಿಸ್ಪರ್ಧಿ ರಾಷ್ಟ್ರಗಳಿಗಿಂತ ಮುನ್ನಡೆ ಸಾಧಿಸಲು ಈ ಅನುದಾನ ಅಗತ್ಯ ಎಂದು ಅವರು ತಿಳಿಸಿದರು.
ಈ ಹೆಚ್ಚುವರಿ ಅನುದಾನವನ್ನು ಸೈನಿಕರ ವೇತನ, ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು, ಶಸ್ತ್ರಾಸ್ತ್ರಗಳ ಆಧುನೀಕರಣ ಹಾಗೂ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಬಳಸಲಾಗುವುದು ಎಂದು ಡ್ಯಾನ್ ಕೇನ್ ವಿವರಿಸಿದರು.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಕೂಡ ಸಮಿತಿಯ ಮುಂದೆ ಹಾಜರಾಗಿ, ಈ ಅನುದಾನದಿಂದ ಹೋರ್ಮುಜ್ ಜಲಸಂಧಿಯಲ್ಲಿನ ಕಾರ್ಯಾಚರಣೆಗಳನ್ನು ಬಲಪಡಿಸುವುದರ ಜೊತೆಗೆ ರಷ್ಯಾ ಮತ್ತು ಚೀನಾದಂತಹ ಎದುರಾಳಿಗಳ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ಜಗತ್ತು ಹೆಚ್ಚು ಅಪಾಯಕಾರಿ ಹಂತದಲ್ಲಿದ್ದು, ತ್ವರಿತ ಹಾಗೂ ಧೈರ್ಯಶಾಲಿ ಕ್ರಮಗಳು ಅಗತ್ಯವಾಗಿವೆ. ಆದ್ದರಿಂದ 2026ನೇ ಹಣಕಾಸು ವರ್ಷದ ಹೆಚ್ಚುವರಿ ರಕ್ಷಣಾ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಆದರೆ ಈ ಪ್ರಸ್ತಾವನೆಗೆ ಸೆನೆಟ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಪಬ್ಲಿಕನ್ ಪಕ್ಷದ ಸೆನೆಟರ್ ಜಾನ್ ಕೆನೆಡಿ, ಪೆಂಟಗನ್ ತನ್ನ ಯೋಜನೆಗಳ ಕುರಿತು ಕಾಂಗ್ರೆಸ್ ಮತ್ತು ಅಮೆರಿಕದ ಜನತೆಗೆ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದರು. ವಿಶೇಷವಾಗಿ ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಹಾಗೂ ಯುದ್ಧತಂತ್ರ ಏನು ಎಂಬುದರ ಕುರಿತು ಸರ್ಕಾರ ಉತ್ತರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಡಿಕ್ ಡರ್ಬಿನ್, ಹೆಚ್ಚುವರಿ ವೆಚ್ಚವನ್ನು ಸಮರ್ಥಿಸುವಲ್ಲಿ ರಕ್ಷಣಾ ಇಲಾಖೆ ವಿಫಲವಾಗಿದೆ ಎಂದು ಟೀಕಿಸಿದರು. ಈ ಹಣವನ್ನು ಯಾವ ಉದ್ದೇಶಗಳಿಗೆ ಮತ್ತು ಹೇಗೆ ಬಳಸಲಾಗುವುದು ಎಂಬ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಅವರು ಹೇಳಿದರು.
ಇನ್ನೋರ್ವ ಡೆಮಾಕ್ರಟಿಕ್ ಸೆನೆಟರ್ ಕ್ರಿಸ್ ವ್ಯಾನ್ ಹೋಲೆನ್, ಟ್ರಂಪ್ ಆಡಳಿತಕ್ಕೆ ಸ್ಪಷ್ಟ ಕಾರ್ಯತಂತ್ರವೇ ಇಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಿಪಬ್ಲಿಕನ್ ಸೆನೆಟರ್ ಜಾನ್ ಹೋವೆನ್, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದು ಜಾಗತಿಕ ಭದ್ರತೆಗೆ ದೊಡ್ಡ ಅಪಾಯವಾಗಿರುವುದರಿಂದ ಅಗತ್ಯ ರಕ್ಷಣಾ ವೆಚ್ಚವನ್ನು ಮಾಡಲೇಬೇಕಾಗಿದೆ ಎಂದು ಸಮರ್ಥಿಸಿದರು.
ಅಮೆರಿಕದ ರಕ್ಷಣಾ ವೆಚ್ಚವನ್ನು ದಾಖಲೆಯ ಮಟ್ಟಕ್ಕೆ ಹೆಚ್ಚಿಸುವ ಈ ಪ್ರಸ್ತಾವನೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಅಂತಿಮ ನಿರ್ಧಾರ ಸೆನೆಟ್ ಮತ್ತು ಪ್ರತಿನಿಧಿಗಳ ಸಭೆಯ ಅನುಮೋದನೆಯ ನಂತರವೇ ಪ್ರಕಟವಾಗಲಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.