
ತುಮಕೂರು, 22 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸಲು ರಾಜ್ಯದ ಎರಡನೇ ಬೃಹತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲೇ ಸ್ಥಾಪಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ.
ತುಮುಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ತಮ್ಮ 25 ವರ್ಷಗಳ ಸುದೀರ್ಘ ಕನಸು. ಬೆಂಗಳೂರಿಗೆ ಹತ್ತಿರವಿರುವ ಹಾಗೂ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿರುವ ತುಮಕೂರು ಇದಕ್ಕೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಬಿಡದಿ ಸೇರಿದಂತೆ ಇಲಾಖೆಯು ವಿವಿಧ ಸ್ಥಳಗಳನ್ನು ಪರಿಶೀಲಿಸುತ್ತಿದ್ದರೂ, ಮೂಲಸೌಕರ್ಯ ಹಾಗೂ ಭೌಗೋಳಿಕ ದೃಷ್ಟಿಯಿಂದ ತುಮಕೂರು ಹೆಚ್ಚು ಯೋಗ್ಯವಾಗಿದ್ದು, ಇದು ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡಲಿದೆ ಎಂದು ತಿಳಿಸಿದರು.
ಇದೇ ವೇಳೆ ತೀವ್ರ ಬರ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ರಾಜ್ಯದ ಗಂಭೀರ ಪರಿಸ್ಥಿತಿ ನಿಭಾಯಿಸಲು ಕೇಂದ್ರದ ನೆರವು ಅಗತ್ಯವಿದ್ದರೂ ಸ್ಪಂದನೆ ಸಿಕ್ಕಿಲ್ಲ. ಬರದ ನಿಯಮ ಸಡಿಲಿಸಿ ತುರ್ತು ನೆರವು ನೀಡುವಂತೆ ತಾವು ಹಾಗೂ ಸಿಎಂ ಜಂಟಿಯಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಅವರು, ಶನಿವಾರ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII