
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದ್ದು, ವಿದ್ಯುತ್ ಬೇಡಿಕೆಯನ್ನು ಪೂರೈಸಲು ಶಾಖೋತ್ಪನ್ನ ಕೇಂದ್ರಗಳಲ್ಲಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಜಲಾಶಯಗಳಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ಅನಿವಾರ್ಯತೆಯಿರುವುದರಿಂದ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವ್ಯಾಪ್ತಿಯ ಶಾಖೋತ್ಪನ್ನ ಸ್ಥಾವರಗಳನ್ನು ಸುಸ್ಥಿತಿಯಲ್ಲಿಟ್ಟು ಉತ್ಪಾದನೆಗೆ ಒತ್ತು ನೀಡಲಾಗಿದೆ. ಪ್ರಸ್ತುತ ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಪ್ರತಿನಿತ್ಯ 100 ದಶಲಕ್ಷ ಯೂನಿಟ್ಗೆ ಏರಿಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಎಲ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ ವಿದ್ಯುತ್ ಬೇಡಿಕೆಗೆ ತಕ್ಕಂತೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII