
ಕೋಲಾರ, ೨೨ ಜುಲೈ(ಹಿ.ಸ) :
ಆ್ಯಂಕರ್: ಬಿಪಿಎಲ್ ಪಡಿತರ ಚೀಟಿಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು ೧.೨೦ ಲಕ್ಷದಿಂದ ೪ ಲಕ್ಷಕ್ಕೆ ಹೆಚ್ಚಿಸಬೇಕು ಹಾಗೂ ಕನಿಷ್ಠ ವೇತನ ಪಡೆಯುವ ಯಾವುದೇ ಕಾರ್ಮಿಕರ ಬಿಪಿಎಲ್ ಕಾರ್ಡ್ ರದ್ದಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಂಘದ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ವಿವಿಧ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿರುವುದು ಸ್ವಾಗತಾರ್ಹ. ಆದರೆ ಹಳೆಯ ಆದಾಯ ಮಿತಿಯ ಕಾರಣ ಸಾವಿರಾರು ಕಾರ್ಮಿಕರು ಬಿಪಿಎಲ್ ಕಾರ್ಡ್ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಬೆಲೆ ಏರಿಕೆ, ಆಹಾರ, ಮನೆ ಬಾಡಿಗೆ, ಶಿಕ್ಷಣ ಮತ್ತು ಆರೋಗ್ಯ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ ೧೦ ವರ್ಷಗಳ ಹಿಂದೆ ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಿಸುವ ಅಗತ್ಯವಿಲ್ಲ ಎಂದರು
ಆರ್ಟಿಐ ಕಾರ್ಯಕರ್ತರ ದೂರಿನ ಆಧಾರದ ಮೇಲೆ ಗ್ರಾಮ ಪಂಚಾಯಿತಿ ನೌಕರರ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಬಾರದು. ಸರ್ಕಾರ ಆದಾಯ ಮಿತಿ ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸುತ್ತಿರುವ ಕಾರಣ ಯಾವುದೇ ತುರ್ತು ಕ್ರಮ ಕೈಗೊಳ್ಳಬಾರದು ಬಿಪಿಎಲ್ ಅರ್ಹತಾ ಮಾನದಂಡಗಳನ್ನು ಮರುಪರಿಶೀಲಿಸಿ, ಅಸಂಘಟಿತ ವಲಯದ ಕಾರ್ಮಿಕರು, ಕೃಷಿ ಮತ್ತು ಕಟ್ಟಡ ಕಾರ್ಮಿಕರು, ಗೃಹ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಸಣ್ಣ ರೈತರ ಆಹಾರ ಭದ್ರತೆಯನ್ನು ಖಾತರಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿಯ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಅಧ್ಯಕ್ಷ ಅಮರನಾರಾಯಣ, ಬಿ.ಎಲ್.ಕೇಶವರಾವ್, ಶಿವಕುಮಾರ್, ಎಂ.ಮೋಹನ್, ಸುಬ್ರಮಣಿ, ಜಿ.ರಾಮಕೃಷ್ಣಪ್ಪ, ವೆಂಕಟರಾಮ್, ನಾಗರಾಜ್, ಚಂದ್ರಪ್ಪ, ಶಿವರಾಮಪ್ಪ, ಆನಂದ್, ಆಂಜಪ್ಪ, ಶ್ರೀನಿವಾಸ್, ಶಿವರಾಜ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್