
ತುಮಕೂರ, 22 ಜುಲೈ (ಹಿ.ಸ.):
ಆ್ಯಂಕರ್:
ದೆಹಲಿಯಲ್ಲಿ ವಿದ್ಯಾರ್ಥಿಗಳ ಪರವಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿ ದುರ್ವರ್ತನೆ ತೋರಿರುವುದನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀವ್ರವಾಗಿ ಖಂಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಹುಲ್ ಗಾಂಧಿಯವರ ಧ್ವನಿ ಅಡಗಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ರೈಲ್ವೆ ಅಪಘಾತಗಳಾದಾಗ ಹಿಂದೆ ಸಚಿವರು ರಾಜೀನಾಮೆ ನೀಡಿದ ಉದಾಹರಣೆಗಳಿದ್ದು, ಪ್ರಧಾನಿ ಮೋದಿಯೂ ರಾಜೀನಾಮೆ ನೀಡಬೇಕು ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ತುಮಕೂರು ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಲಾಗಿದೆ ಎಂದರು. ದೆಹಲಿಯಲ್ಲಿ ಹೈಕಮಾಂಡ್ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII