
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ರೂಪ ನೀಡಲು ಮುಂದಾಗಿರುವ ಸರ್ಕಾರ, ಕೆಎಸ್ಟಿಡಿಸಿ ವ್ಯಾಪ್ತಿಯ 'ಮಯೂರ' ಸರಣಿ ಹೋಟೆಲ್ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಉನ್ನತೀಕರಿಸಲು ನಿರ್ಧರಿಸಿದೆ.
ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ನೂತನ 'ಮಯೂರ ಸನ್ರೈಸ್ ರೆಸ್ಟೋರೆಂಟ್' ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಈ ಮಹತ್ವದ ಘೋಷಣೆ ಮಾಡಿದರು. ಹೋಟೆಲ್ಗಳ ನಿರ್ವಹಣಾ ಗುಣಮಟ್ಟ ಸುಧಾರಿಸಲು ಪ್ರವಾಸೋದ್ಯಮ ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಮಾಲೀಕತ್ವ ಸಂಪೂರ್ಣ ಸರ್ಕಾರದ ಬಳಿಯೇ ಇರಲಿದೆ. ಮಧ್ಯಮ ವರ್ಗದವರಿಗೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಸೌಲಭ್ಯ ಕಲ್ಪಿಸುವುದು ಇದರ ಗುರಿಯಾಗಿದೆ ಎಂದರು.
ಇದೇ ವೇಳೆ, ನಂದಿಬೆಟ್ಟದಲ್ಲಿ ಹೆಚ್ಚುತ್ತಿರುವ ದಟ್ಟಣೆಗೆ ಕಡಿವಾಣ ಹಾಕಲು ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಇಕೋ-ಫ್ರೆಂಡ್ಲಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ, ಬಹುನಿರೀಕ್ಷಿತ ನಂದಿಬೆಟ್ಟ ರೋಪ್ವೇ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII