
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗ ತಮ್ಮ ಮೇಲೆ ನಡೆದ ಮೊಟ್ಟೆ ದಾಳಿ ಮತ್ತು ಹಲ್ಲೆ ಯತ್ನವನ್ನು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ನ ಈ ಹೇಡಿ ಕೃತ್ಯಗಳಿಗೆ ತಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಜನವಿರೋಧಿ ಧೋರಣೆಗಳ ವಿರುದ್ಧ ತಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಮೊದಲೇ ಆಯುಧ ಹಾಗೂ ಮೊಟ್ಟೆಗಳನ್ನು ಸಂಗ್ರಹಿಸಿಟ್ಟುಕೊಂಡು ದಾಳಿ ನಡೆಸಿದ್ದಾರೆ. ವೈಚಾರಿಕವಾಗಿ ಎದುರಿಸಲು ಧೈರ್ಯವಿಲ್ಲದೆ ಇಂತಹ ಗೂಂಡಾಗಿರಿಗೆ ಕೈಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜಧಾನಿಯ ನಡುರಸ್ತೆಯಲ್ಲಿ ವಿಪಕ್ಷ ಶಾಸಕರ ಮೇಲೆಯೇ ಇಂತಹ ಭೀಕರ ದಾಳಿಗಳು ನಡೆಯುತ್ತಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಶಾಸಕರಿಗೇ ರಕ್ಷಣೆ ಇಲ್ಲದಾಗ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ಎಷ್ಟೇ ಮೊಟ್ಟೆ ಎಸೆದರೂ ಜನಪರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಈ ಕೂಡಲೇ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಹಲ್ಲೆಕೋರರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII