
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಹಾಗೂ ಪೌಷ್ಟಿಕ ಆಹಾರದ ಬಾಕಿ ಹಣ ಬಿಡುಗಡೆ ಮಾಡದೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಎಕ್ಸ್‌ನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೂ 'ನಿರಂತರ' ಆ್ಯಪ್‌ನ ತಾಂತ್ರಿಕ ಸಮಸ್ಯೆ ಮತ್ತು ಇಂಟರ್ನೆಟ್ ಕೊರತೆಯಿಂದ ಅಡಚಣೆ ಉಂಟಾಗಿದೆ ಎಂದು ಟೀಕಿಸಿದ್ದಾರೆ.
ಉತ್ತರ ಕನ್ನಡ ಸೇರಿದಂತೆ ಅರಣ್ಯ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆಯಿಂದ ಆ್ಯಪ್ ಮೂಲಕ ಹಾಜರಾತಿ ದಾಖಲಿಸಲು ಶಿಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಬಿಸಿಯೂಟದ ಅನುದಾನಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ತಾಂತ್ರಿಕ ದೋಷ ಹಾಗೂ ನೆಟ್‌ವರ್ಕ್ ಸಮಸ್ಯೆ ಬಗೆಹರಿಯುವವರೆಗೆ ಭೌತಿಕ ಹಾಜರಾತಿ ಪುಸ್ತಕವನ್ನೇ ಅಂತಿಮ ಮಾನದಂಡವಾಗಿ ಪರಿಗಣಿಸಿ ಬಿಸಿಯೂಟದ ಅನುದಾನ ಬಿಡುಗಡೆ ಮಾಡಬೇಕು. ಜೊತೆಗೆ ಅಂಗನವಾಡಿ ಮಕ್ಕಳ ಮೊಟ್ಟೆ ಹಾಗೂ ಹಾಲಿನ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಕ್ಕಳ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟ ಆಡಬಾರದು ಎಂದು ಎಚ್ಚರಿಕೆ ನೀಡಿದ ಆರ್. ಅಶೋಕ, ಆಡಳಿತ ವೈಫಲ್ಯ ಮುಂದುವರಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.