
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರು ನಗರದಲ್ಲಿ ತೆರವುಗೊಳಿಸಲಾದ ಪಾದಾಚಾರಿ ಮಾರ್ಗಗಳಲ್ಲಿ ಮೋಟಾರು ವಾಹನಗಳನ್ನು ಚಲಾಯಿಸುವ ಸವಾರರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಪ್ರಸ್ತುತ ಇರುವ 500 ರೂ. ದಂಡದ ಮೊತ್ತವನ್ನು 5,000 ರೂಪಾಯಿಗೆ ಏರಿಸುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರ ಸಂಚಾರ ಪೋಲಿಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಒತ್ತುವರಿ ತೆರವುಗೊಳಿಸಿದ ಫುಟ್ಪಾತ್ಗಳಲ್ಲಿ ಕೆಲ ಸವಾರರು ಯಾವುದೇ ಭಯವಿಲ್ಲದೆ ಬೈಕ್ ಚಲಾಯಿಸುತ್ತಿರುವುದು ಕಂಡುಬಂದಿದೆ. ಇದರಿಂದ ಪಾದಾಚಾರಿಗಳಿಗೆ ಅಪಾಯ ಎದುರಾಗಲಿದ್ದು, ಇಂತಹ ಅಜಾಗರೂಕ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಅಪರಾಧ ತಡೆಯಲು ದಂಡದ ಮೊತ್ತ ಗಣನೀಯವಾಗಿ ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪ್ರಮುಖ ರಸ್ತೆಗಳಲ್ಲಿ 'ಪರ್ಯಾಯ ಪಾರ್ಕಿಂಗ್' ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಿಂಗಳ ಎಲ್ಲ ದಿನಗಳಲ್ಲೂ ರಸ್ತೆಯ ಎರಡೂ ಬದಿ ವಾಹನ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದ್ದು, ಈ ನಿಯಮ ಕಟ್ಟುನಿಟ್ಟಾದರೆ ರಸ್ತೆಯಲ್ಲಿ ಸಾಕಷ್ಟು ಜಾಗ ಉಳಿಯಲಿದೆ ಎಂದರು. ಅಲ್ಲದೆ, ಸಿಗ್ನಲ್ ಹಾಗೂ ಪ್ರಮುಖ ಜಂಕ್ಷನ್ಗಳ ಬಳಿ ಬಸ್ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದ ಸಚಿವರು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹಿರಿಯ ಪೊಲೀಸ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII