



ಹೊಸಪೇಟೆ, 22 ಜುಲೈ (ಹಿ.ಸ.):
ಆ್ಯಂಕರ್ : ವಿಜಯನಗರ ಜಿಲ್ಲೆ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆಯಾಗಿರುವ ಜಿಲ್ಲೆಯಾಗಿದ್ದು, ಬರದ ಛಾಯೆ ಆವರಿಸಿದೆ. ಈ ನಿಟ್ಟಿನಲ್ಲಿ ಮಳೆಯಾಶ್ರಿತ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿ ಅಲ್ಲಿನ ನೈಜ ಸ್ಥಿತಿಯನ್ನು ಪರಿಶೀಲಿಸಿದ ವರದಿಯನ್ನು ಒಂದು ವಾರದೊಳಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಅಭಾವ ಎದುರಿಸುತ್ತಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೃಷಿ ಬೆಳೆ ಹಾನಿ, ಕುಡಿಯುವ ನೀರು ಹಾಗೂ ಉದ್ಯೋಗ ಖಾತರಿ ಯೋಜನೆ ಕುರಿತು ಜಿಲ್ಲಾಡಳಿತ ನೈಜ ವಸ್ತು ಸ್ಥಿತಿ ಗಂಭೀರತೆಯ ಪರಿಶೀಲನೆಗೆ ಖುದ್ದು ಜಿಲ್ಲಾಧಿಕಾರಿಗಳೊಂದಿಗಿನ ತಂಡ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು, ಜಿಲ್ಲೆಯಲ್ಲಿ ಸರಾಸರಿ ಶೇ.60 ರಷ್ಟು ತೀವ್ರ ಮಳೆ ಕೊರತೆ ದಾಖಲಾಗಿದೆ. ಆದ್ದರಿಂದ ಪ್ರತಿಯೊಂದು ತಾಲೂಕಿನಲ್ಲೂ ಆಯ್ದ ಕೃಷಿ ಭೂಮಿಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಜಮೀನುಗಳ ಪರಿಸ್ಥಿತಿ, ಬೆಳೆ ನಷ್ಟ ಮತ್ತು ರೈತರ ಸಂಕಷ್ಟದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಳೆದ ಎರಡು-ಮೂರು ತಿಂಗಳುಗಳಿಂದ ಸೂಕ್ತ ಮಳೆಯಾಗದೆ ತಾಲೂಕಿನಾದ್ಯಂತ ಬೆಳೆ ಹಾನಿಯಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ವಿ ಬಿ ಜಿ ರಾಮ್ ಜಿ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ತಕ್ಷಣವೇ ಕಾಮಗಾರಿಗಳನ್ನು ಆರಂಬಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುವುದು. ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರಿಂದ ಗ್ರಾಮಸ್ಥರು ಮತ್ತು ಕೂಲಿ ಕಾರ್ಮಿಕರು ಗುಳೆ ಹೋಗಬಾರದೆಂದು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್