
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ಬರಗಾಲ ಹೆಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಗುಳೆ ಹೋಗುತ್ತಿದ್ದಾರೆ. ಕೂಡಲೇ ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರಿಗೆ ಎಕರೆಗೆ 50,000 ರೂ. ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬರದ ತಾಂಡವ ನಡೆಯುತ್ತಿದ್ದರೂ, ಕಾಂಗ್ರೆಸ್ ಮುಖಂಡರು, ಸಚಿವರು, ಶಾಸಕರು ಜಾಲಿ ಮಾಡಲು ದೆಹಲಿಗೆ ಹೋಗಿದ್ದಾರೆ. ಇದು ಕರ್ನಾಟಕದ ಬರ ಅಲ್ಲ, ಇದು ಜನರ,ರೈತರ ಹಣೆಬರಹ ಎನ್ನಬೇಕಿದೆ. ಬಿಜೆಪಿ ಅವಧಿಯಲ್ಲಿ ಬರಗಾಲ ಅಥವಾ ಪ್ರವಾಹದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದೆವು ಹಾಗೂ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಆದರೆ ಸಿಎಂ ಡಿ.ಕೆ.ಶಿವಕುಮಾರ್ ಬೆಳೆ ಬೆಳೆಯಬಾರದು ಎಂದು ಕರೆ ನೀಡುತ್ತಾರೆ. ಹಾಗಾದರೆ ರೈತರು ಏನು ಮಾಡಬೇಕು? ಎಂದು ಅವರೇ ಹೇಳಬೇಕು. ರೈತರಿಗೂ ಸಾರ್ವತ್ರಿಕ ರಜೆ ಕೊಟ್ಟುಬಿಡಲಿ. ವಿಬಿ ಜಿ ರಾಮ್ ಜಿ ಯೋಜನೆಗೆ ಮೊದಲು ವಿರೋಧಿಸಿ ಈಗ ಜಾರಿ ಮಾಡುವುದಾಗಿ ನಾಟಕ ಆಡುತ್ತಿದ್ದಾರೆ. ಕಾವೇರಿ ನೀರನ್ನು ಯಾರಿಗೂ ಬಳಸಲು ಬಿಡುತ್ತಿಲ್ಲ. ಆದರೆ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಯುತ್ತಿದೆ ಎಂದು ದೂರಿದರು.
ಕಳೆದ ವಾರ ಮಳವಳ್ಳಿ ಭಾಗದಲ್ಲಿ ಒಣಗಿರುವ ಕಬ್ಬು ವೀಕ್ಷಿಸಿದ್ದೆ. 157 ತಾಲೂಕುಗಳಲ್ಲಿ ಬರ ಇದೆ. 80% ರಷ್ಟು ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಜಾನುವಾರುಗಳಿಗೆ ಮೇವಿಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ. ರೈತರು ದನಕರುಗಳನ್ನು ಕಟುಕರಿಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಸಚಿವರು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದಾರೆ. 10,000 ಕೋಟಿ ಕೇಂದ್ರ ಸರ್ಕಾರ ಕೊಡಬೇಕು ಎಂದಿದ್ದಾರೆ. ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸದೆ ಅನುದಾನ ಹೇಗೆ ಬಿಡುಗಡೆ ಆಗಲು ಸಾಧ್ಯ?
ಇವರು ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿ ಪರಿಹಾರ ಸಿಗುವುದು ಯಾವಾಗ? ಅದಕ್ಕೆ ಮೊದಲು ಎಸ್ ಡಿ ಆರ್ ಎಫ್ ನಿಧಿಯಿಂದ ಹಣ ಬಿಡುಗಡೆ ಮಾಡಿ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜೂನ್‌ನಲ್ಲಿ ಮಳೆ ಕೊರತೆ ಪ್ರಮಾಣ 42% ಆಗಿದೆ. ಮಲೆನಾಡಿನಲ್ಲಿ 43%, ಕರಾವಳಿಯಲ್ಲಿ 35%, ಉತ್ತರ ಒಳನಾಡಿನಲ್ಲಿ 33%, ದಕ್ಷಿಣ ಒಳನಾಡಿನಲ್ಲಿ 31% ಮಳೆ ಕೊರತೆಯಾಗಿದೆ. ವಿಜಯಪುರದಲ್ಲಿ 6, ಮೈಸೂರಿನಲ್ಲಿ 5, ಹಾವೇರಿಯಲ್ಲಿ 4, ಚಿಕ್ಕಮಗಳೂರಿನಲ್ಲಿ 3 ಸೇರಿ ರಾಜ್ಯದಲ್ಲಿ ಒಟ್ಟು 31 ರೈತರು ಕೇವಲ ಎರಡು ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 2,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಹಣೆಬರಹ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಿರಳೆ ಪಾರ್ಟಿಯ ಜೊತೆ ಕೈ ಜೋಡಿಸುತ್ತಾರೆ. ಆದರೆ ಬರಗಾಲ ಬಂದಿದ್ದರೂ ರೈತರ ಜೊತೆ ಕೈ ಜೋಡಿಸಿಲ್ಲ. ಅಂಡಮಾನ್‌ಗೆ ಹೋಗಿ ಪರಿಸರ ಉಳಿಸುವ ಪ್ರತಿಭಟನೆ ಮಾಡುವ ಇವರು ರೈತರ ಪರ ಮಾತಾಡಲ್ಲ. ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡುವ ಮೊದಲು, ರಾಜ್ಯ ಸರ್ಕಾರದಿಂದ ಬರ ಘೋಷಣೆ ಮಾಡಬೇಕಿತ್ತು. ಆರ್‌ಎಸ್‌ಎಸ್ ಬಗ್ಗೆ ಮಾತಾಡುವ ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕದಿಂದ ವಲಸೆ ಹೋಗುತ್ತಿರುವ ಜನರ ಲೆಕ್ಕ ನೀಡಲಿ. ಯಾದಗಿರಿ ಜಿಲ್ಲೆಯಲ್ಲಿ ತಾಂಡಾಗಳ ಜನರು ಮನೆ ಬಿಟ್ಟು ಗುಳೆ ಹೋಗುತ್ತಿದ್ದಾರೆ. ಆ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.