
ಬೆಂಗಳೂರು, 22 ಜುಲೈ (ಹಿ.ಸ.)
ಆ್ಯಂಕರ್:
ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಯಶಸ್ವಿ 'ದಾವಣಗೆರೆ ಮಾದರಿ'ಯನ್ನು ಅನುಸರಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಚಿವರ ಗೃಹ ಕಚೇರಿ 'ಕಾವೇರಿ'ಯಲ್ಲಿ ಸ್ವಚ್ಛ ಭಾರತ ಮಿಷನ್ 2.0 ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಮನೆಮನೆಗಳಲ್ಲೇ ಶೇ. 100ರಷ್ಟು ಹಸಿ ಹಾಗೂ ಒಣ ಕಸ ವಿಂಗಡಣೆ ಯಶಸ್ವಿಯಾಗಿದ್ದು, ಇದೇ ಮಾದರಿಯನ್ನು ರಾಜ್ಯದ ಇತರೆ ನಗರಗಳಲ್ಲೂ ತಕ್ಷಣ ಜಾರಿಗೆ ತರಬೇಕು ಎಂದರು. ಹಳೆಯ ಲೆಗಸಿ ವೇಸ್ಟ್ ವಿಲೇವಾರಿಗೆ ವೇಗ ನೀಡುವಂತೆ ಹಾಗೂ ಹೊಸ ಕಸ ರಾಶಿಯಾಗದಂತೆ ಎಚ್ಚರಿಕೆ ವಹಿಸಲು ತಿಳಿಸಿದರು.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಅನುದಾನ ಅಥವಾ ಜಾಗದ ಕೊರತೆಯ ನೆಪಗಳನ್ನು ಸಹಿಸುವುದಿಲ್ಲ ಎಂದರು. ಸಭೆಯಲ್ಲಿ ರಾಜ್ಯ ಅಭಿಯಾನ ನಿರ್ದೇಶಕ ಡಾ. ಆರ್. ಸೆಲ್ವಮಣಿ ಹಾಗೂ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ ಉಪಸ್ಥಿತರಿದ್ದು ಪ್ರಗತಿ ವರದಿ ಒದಗಿಸಿದರು. ನಿಗದಿತ ಕಾಲಮಿತಿಯೊಳಗೆ ಶೌಚಾಲಯ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕಗಳ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಚಿವರು ತಾಕೀತು ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII