
ಕೋಲಾರ, ೨೨ ಜುಲೈ (ಹಿ.ಸ) :
ಆ್ಯಂಕರ್: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಬದ್ದತೆ ಹೊಂದಿದೆ ಆದರೆ ನೀಟ್ ವಿಷಯ ಮುಂದಿಟ್ಟುಕೊ0ಡು ಕೆಲವು ದುಷ್ಟ ಶಕ್ತಿಗಳು ಪ್ರತಿಭಟನೆ ನೆಪದಲ್ಲಿ ಯುವಜನತೆಯನ್ನು ದಿಕ್ಕು ತಪ್ಪಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಇದರ ಹಿಂದೆ ಅಂತರರಾಷ್ಟಿಯ ಷಡ್ಯಂತ್ರವಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.
ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಸಂಸತ್ತಿನಲ್ಲಿ ಅಂತರರಾಷ್ಟಿಯ ಹಣ ಪಡೆದು ಇಲ್ಲಿನ ಯುವಕರನ್ನು ದಾರಿ ತಪ್ಪಿಸುತ್ತಿರುವ ಕೆಲವು ದುಷ್ಟ ಶಕ್ತಿಗಳಿಗೆ ಮಾರಕವಾದ ಎಫ್ಸಿಆರ್ಎ ಬಿಲ್ಅನ್ನು ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿರುವ ಸಂದರ್ಭದಲ್ಲೇ ನಡೆಯುತ್ತಿರುವ ಈ ಹೋರಾಟದ ಹಿಂದೆ ಯಾವ ಕೈವಾಡವಿದೆ ಎಂಬುದರ ಕುರಿತು ತನಿಖೆಗೆ ಒತ್ತಾಯಿಸಿದರು.
ಈಗಾಗಲೇ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿಗಳನ್ನು ಬಂಧಿಸಲಾಗಿದೆ, ಅವರಿಗೆ ಕಠಿಣ ಶಿಕ್ಷೆಯ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಹೊರ ದೇಶಗಳ ಎಂಜಲು ಕಾಸು ತಿನ್ನುತ್ತಿರುವ ಕೆಲವು ದೇಶದ್ರೋಹಿಗಳು ಪ್ರತಿಭಟನೆ ಸಂದರ್ಭದಲ್ಲಿ ನೀಟ್ ವಿಷಯ ಬಿಟ್ಟು ನೀಡುತ್ತಿರುವ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ, ನೇಪಾಳ,ಬಾಂಗ್ಲ, ಶ್ರೀಲಂಕಾದAತೆ ದಂಗೆ ನಡೆಸುವ ಮಾತುಗಳು, ಹಿಂದುತ್ವದ ವಿರುದ್ದದ ಮಾತುಗಳು, ಇಂತಹ ಅನುಮಾನಗಳಿಗೆ ಕಾರಣವಾಗಿವೆ.ಸತತ ಭ್ರಷ್ಟಾಚಾರದಲ್ಲಿ ಮುಳುಗಿ ಬೇಲ್ ಮೇಲಿರುವ ಅನೇಕ ಕಾಂಗ್ರೆಸ್, ಎಎಪಿ, ಸಮಾಜವಾದಿ ಪಕ್ಷದ ನಾಯಕರು ೩೭೦ನೇ ವಿಧಿ ಕುರಿತು ಮತ್ತು ಭಾರತ ಮಾತೆಯ ಕುರಿತು ಆಡಿರುವ ಮಾತುಗಳು ಖಂಡನೀಯವಾಗಿದ್ದು, ಕೆಲವು ನಕಲಿ ವಿದ್ಯಾರ್ಥಿಗಳನ್ನು ಬಿಟ್ಟು ದೇಶ ವಿರೋಧಿ ಚಳುವಳಿ ನಡೆಸುತ್ತಿದ್ದಾರೆ ಎಂದರು.
ಅಖಿಲೇಶ್,ರಾಹುಲ್, ಖರ್ಗೆ,ಎಎಪಿ ಮುಖಂಡರು, ಕಾಕ್ರೋಚ್ ಪಾರ್ಟಿ, ಪ್ರಕಾಶ್ ರಾಜ್ರಂತಹ ಕೆಲವು ಮಂದಿ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಟ್ಟುಕೊಂಡು ಇಂತಹ ಪಿತೂರಿಗೆ ಇಳಿದಿದ್ದಾರೆ. ಹಿಂದೂತ್ವ, ೩೭೦ನೇ ವಿಧಿ ಬಗ್ಗೆ ಮಾತನಾಡುವ ಇವರು ದೇಶದಲ್ಲಿರಲು ನಾಲಾಯಕ್ ಅವರು ದೇಶಬಿಟ್ಟು ಹೋಗಲಿ ಎಂದು ಆಕ್ರೋಷ ವ್ಯಕ್ತಪಡಿಸಿದರು.ಇವರ ದೇಶ ವಿರೋಧಿ ಹೋರಾಟಕ್ಕೆ ಪ್ರಚಾರ ನೀಡುತ್ತಿಲ್ಲ ಎಂದು ಮಾಧ್ಯಮಗಳ ವಿರುದ್ದವೂ ಮಾತನಾಡಿದ್ದಾರೆ, ರಾಮಮಂದಿರದ ಅವ್ಯವಹಾರದ ಕುರಿತು ಮಾತನಾಡುವ ಅಖಿಲೇಶ್ ಯಾದವ್ ಅದೇ ಭ್ರಷ್ಟತೆಯ ಕಿಂಗ್ಪಿನ್ ಜತೆ ೯೦೦ ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು.
ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು,ಯುವಕರು ದೇಶದ್ರೋಹದ ಹೋರಾಟದ ನಿಜಸ್ವರೂಪ ತಿಳಿಯುತ್ತಿದ್ದಂತೆ ಅಲ್ಲಿಂದ ದೂರವಾಗಿದ್ದಾರೆ, ಇದನ್ನರಿತು ಕರ್ನಾಟಕ ಸೇರಿದಂತೆ ಬಿಜೆಪಿಯೇತರ ರಾಜ್ಯಗಳಲ್ಲಿ ಯುವಜನತೆಯನ್ನು ದಾರಿತಪ್ಪಿಸಲು ಸಭೆಗಳನ್ನು ನಡೆಸಲು ಮುಂದಾಗಿದ್ದು, ಕೋಲಾರದಲ್ಲಿ ಸಭೆ ನಡೆಸಿರುವ ಮಾಹಿತಿ ಇದೆ ಎಂದ ಅವರು, ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಮನವೊಲಿಸಿ ಕರೆದೊಯ್ಯುವ ಪ್ರಯತ್ನ ನಡೆದಿದೆ. ದೇಶದ ಯುವಜನತೆ ಎಚ್ಚರದಿಂದಿರಿ ಎಂದು ಕರೆ ನೀಡಿರುವ ಅವರು, ದೇಶ ಎಂದಾಗ ನಾವೆಲ್ಲಾ ಪಕ್ಷ ಬಿಟ್ಟು ಒಂದೇ ಎಂಬ ಕೂಗಿರಲಿ, ಹಿಂದೂ ವಿರೋಧಿ ಚಟುವಟಿಕೆಯನ್ನು ಸಹಿಸಲಾಗದು ಎಂದ ಅವರು, ಅರಾಜಕತೆ ಸೃಷ್ಟಿಗೆ ಯತ್ನಿಸುತ್ತಿರುವವರಿಗೆ ಎಚ್ಚರಿಕೆ ನೀಡಿ, ಯೋಚಿಸಿ ಮುನ್ನಡೆಯಿರಿ ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವಮಟ್ಟದಲ್ಲಿ ಸಾಧನೆಯತ್ತ ಕೊಂಡೊಯ್ದಿದ್ದಾರೆ, ಇಂತಹ ಸಂದರ್ಭದಲ್ಲಿ ಇಂತಹ ದೇಶದ್ರೋಹಿ ಪ್ರತಿಭಟನೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುವ ಯತ್ನಕ್ಕೆ ಯುವಕರು ಸಹಕಾರ ನೀಡಬಾರದು ಎಂದು ಕೋರಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್