
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (ಬಿ.ಪ್ಯಾಕ್) ನಗರದ ಸಾರ್ವಜನಿಕ ಶೌಚಾಲಯಗಳ ಕುರಿತು ನಡೆಸಿದ ನಾಗರಿಕರ ನೇತೃತ್ವದ ಸಮಗ್ರ ಸಮೀಕ್ಷೆಯ ಬೆಂಗಳೂರು ಸಾರ್ವಜನಿಕ ಶೌಚಾಲಯಗಳ ಆಡಿಟ್ ವರದಿ–2026 ಅನ್ನು ಬಿಡುಗಡೆ ಮಾಡಿದೆ. ಏಪ್ರಿಲ್ ಹಾಗೂ ಮೇ 2026ರಲ್ಲಿ ಬಿ.ಸಿಎಲ್‌ಐಪಿ ನಾಗರಿಕ ನಾಯಕರು ಮತ್ತು ವಿದ್ಯಾರ್ಥಿ ಸ್ವಯಂಸೇವಕರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 142 ಸಾರ್ವಜನಿಕ ಶೌಚಾಲಯಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ.
ವರದಿಯ ಪ್ರಕಾರ, 1.4 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಿಲ್ಲ. ನಗರದಲ್ಲಿ ಕೇವಲ 800–900 ಸಾರ್ವಜನಿಕ ಶೌಚಾಲಯಗಳಿದ್ದು, ಜಿಬಿಎ ಅಧಿಕೃತ ಪಟ್ಟಿಯಲ್ಲಿ 479 ಮಾತ್ರ ದಾಖಲಾಗಿವೆ. ಇದರಿಂದ ಸುಮಾರು 25 ಸಾವಿರದಿಂದ 30 ಸಾವಿರ ಜನರಿಗೆ ಒಂದೇ ಸಾರ್ವಜನಿಕ ಶೌಚಾಲಯ ಲಭ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಡಿಟ್‌ನ ಪ್ರಮುಖ ಅಂಶಗಳು
- ಪರಿಶೀಲನೆಗೊಳಪಟ್ಟ 142 ಶೌಚಾಲಯಗಳಲ್ಲಿ 37 (26%) ಸಂಪೂರ್ಣ ಕಾರ್ಯನಿರ್ವಹಿಸುತ್ತಿಲ್ಲ.
- ಕೇವಲ 6 (4.2%) ಶೌಚಾಲಯಗಳು ಮಾತ್ರ ಅತ್ಯಂತ ಸ್ವಚ್ಛ ಎಂದು ಗುರುತಿಸಲ್ಪಟ್ಟಿವೆ.
- 58% ಶೌಚಾಲಯಗಳಲ್ಲಿ ದುರ್ವಾಸನೆ ಕಂಡುಬಂದಿದೆ.
- ಕೇವಲ 56% ಶೌಚಾಲಯಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ.
- ಕೇವಲ 9 ಶೌಚಾಲಯಗಳಲ್ಲಿ ಮಾತ್ರ ದಿವ್ಯಾಂಗರಿಗೆ ರ್ಯಾಂಪ್ ವ್ಯವಸ್ಥೆ ಇದೆ.
- ಕಾರ್ಯನಿರ್ವಹಿಸುತ್ತಿರುವ ಶೌಚಾಲಯಗಳಲ್ಲಿ ಕೇವಲ 40%ರಲ್ಲಿ ಮಾತ್ರ ನೀರಿನ ವ್ಯವಸ್ಥೆ ಲಭ್ಯ.
- ಯಾವುದೇ ಶೌಚಾಲಯದಲ್ಲಿ ಸಾಬೂನು ವಿತರಕ ಅಥವಾ ಕಸದ ಬುಟ್ಟಿ ಇರಲಿಲ್ಲ.
- ಕೇವಲ 15% ನಿರ್ವಹಣಾ ಸಿಬ್ಬಂದಿ ಮಹಿಳೆಯರು ಆಗಿದ್ದಾರೆ.
- ಗುತ್ತಿಗೆದಾರರ ವಿವರ ಹಾಗೂ ಬಳಕೆ ಶುಲ್ಕದ ಮಾಹಿತಿ ಬಹುತೇಕ ಕಡೆಗಳಲ್ಲಿ ಪ್ರದರ್ಶಿಸಿಲ್ಲ.
ಬಿ.ಪ್ಯಾಕ್ ಶಿಫಾರಸುಗಳು
ನಗರದ ಸಾರ್ವಜನಿಕ ಶೌಚಾಲಯ ವ್ಯವಸ್ಥೆಯನ್ನು ಸುಧಾರಿಸಲು ಬಿ.ಪ್ಯಾಕ್ ಹಲವು ಶಿಫಾರಸುಗಳನ್ನು ಮಾಡಿದೆ. ಕಾರ್ಯನಿರ್ವಹಿಸದ ಶೌಚಾಲಯಗಳನ್ನು 30 ದಿನಗಳ ತುರ್ತು ಅಭಿಯಾನ ಮೂಲಕ ದುರಸ್ತಿ ಮಾಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಏಕೀಕೃತ ಸಾರ್ವಜನಿಕ ಶೌಚಾಲಯ ನಿರ್ವಹಣಾ ಘಟಕ ಸ್ಥಾಪಿಸಬೇಕು. ಕೇವಲ ನಿರ್ಮಾಣಕ್ಕೆ ಸೀಮಿತವಾಗದೆ ಐದು ವರ್ಷದ ಕಾರ್ಯಾಚರಣೆ ಮತ್ತು ನಿರ್ವಹಣಾ (ಒ & ಎಂ) ಒಪ್ಪಂದಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದೆ.
ಪ್ರತಿ ಶೌಚಾಲಯದಲ್ಲಿ ನಿರಂತರ ನೀರು, ಬೆಳಕು, ಸಾಬೂನು, ಕಸದ ಬುಟ್ಟಿ ಹಾಗೂ ನಿಯಮಿತ ಸ್ವಚ್ಛತೆ ಖಚಿತಪಡಿಸಬೇಕು. ದಿವ್ಯಾಂಗರಿಗೆ ಅನುಕೂಲವಾಗುವಂತೆ ಎಲ್ಲಾ ಶೌಚಾಲಯಗಳನ್ನು ರೂಪಾಂತರಿಸಬೇಕು. ಮಹಿಳೆಯರು ಹಾಗೂ ತೃತೀಯಲಿಂಗಿಗಳಿಗಾಗಿ ಸುರಕ್ಷಿತ ಮತ್ತು ಸಮರ್ಪಕ ಶೌಚಾಲಯಗಳಿಗೆ ಆದ್ಯತೆ ನೀಡಬೇಕು. ನಿವಾಸಿಗಳ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ನಾಗರಿಕರನ್ನು ಮೇಲ್ವಿಚಾರಣೆಯಲ್ಲಿ ಭಾಗಿಯಾಗಿಸುವ ಮೂಲಕ ಪಾರದರ್ಶಕತೆ ಮತ್ತು ಜವಾಬ್ದಾರಿತನ ಹೆಚ್ಚಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.
1,000ಕ್ಕೂ ಹೆಚ್ಚು ಹೊಸ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಒತ್ತಾಯ
ಬಿ.ಸಿಎಲ್‌ಐಪಿ ಮುಖ್ಯಸ್ಥ ರಾಗವೇಂದ್ರ ಪೂಜಾರಿ ಎಚ್.ಎಸ್. ಅವರು, ನಗರದ ಜನಸಂಖ್ಯೆ ಮತ್ತು ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು 1,000ಕ್ಕೂ ಹೆಚ್ಚು ಆಧುನಿಕ, ಸ್ವಚ್ಛ ಹಾಗೂ ಎಲ್ಲರಿಗೂ ಅನುಕೂಲವಾಗುವ ಸಾರ್ವಜನಿಕ ಶೌಚಾಲಯಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಬೇಕೆಂದು ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಒತ್ತಾಯಿಸಿದರು. ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆಗಳು, ಉದ್ಯಾನಗಳು, ಪ್ರವಾಸಿ ತಾಣಗಳು ಹಾಗೂ ಜನಸಂದಣಿ ಪ್ರದೇಶಗಳಿಗೆ ಆದ್ಯತೆ ನೀಡಬೇಕು ಎಂದರು.
ಬಿ.ಪ್ಯಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವತಿ ಅಶೋಕ್ ಮಾತನಾಡಿ, ಸಾರ್ವಜನಿಕ ಶೌಚಾಲಯಗಳು ಐಷಾರಾಮಿ ಸೌಲಭ್ಯವಲ್ಲ. ಸಾರ್ವಜನಿಕ ಆರೋಗ್ಯ, ಮಹಿಳೆಯರ ಸುರಕ್ಷತೆ, ಮಾನವ ಘನತೆ ಹಾಗೂ ನಗರದ ಗುಣಮಟ್ಟವನ್ನು ನಿರ್ಧರಿಸುವ ಅತ್ಯಗತ್ಯ ನಾಗರಿಕ ಮೂಲಸೌಕರ್ಯ. ಜಾಗತಿಕ ನಗರವಾಗಲು ಬಯಸುವ ಬೆಂಗಳೂರು ಈ ಮೂಲಭೂತ ಅಗತ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮೀಕ್ಷೆಯ ನೇತೃತ್ವ ವಹಿಸಿದ್ದ ಬಿ.ಸಿಎಲ್‌ಐಪಿ ಸಂಯೋಜಕ ಮಂಜುನಾಥ್ ಅವರು, ಈ ವರದಿ ಸರ್ಕಾರ, ನಾಗರಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಸ್ವಚ್ಛ, ಸುರಕ್ಷಿತ ಹಾಗೂ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ನಿರ್ಮಿಸಲು ಮಾರ್ಗಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.