
ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್:
ಮಂಗಳವಾರ ಬೆಳಿಗ್ಗೆ ಸಮಯದಲ್ಲೇ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ ಹಾಗೂ ವಿದ್ಯುತ್ ವ್ಯತ್ಯಯದಿಂದಾಗಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಇದರಿಂದಾಗಿ ಕಚೇರಿ, ಕಾಲೇಜು ಹಾಗೂ ದೈನಂದಿನ ಕೆಲಸಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಪರದಾಡುವಂತಾಯಿತು. ಹಸಿರು ಮಾರ್ಗದ ಕೊನೆಯ ನಿಲ್ದಾಣಗಳಾದ ಮಾದಾವರ ಹಾಗೂ ಯಶವಂತಪುರ ನಡುವಿನ ಮಾರ್ಗದಲ್ಲಿ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ, ಪೀಣ್ಯ ಇಂಡಸ್ಟ್ರಿ, ಜಾಲಹಳ್ಳಿ, ದಾಸರಹಳ್ಳಿ, ನಾಗಸಂದ್ರ, ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಸುಮಾರು 1 ಗಂಟೆಗೂ ಅಧಿಕ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ಬೆಳಗ್ಗೆಯ ನಿರ್ಣಾಯಕ ಸಮಯದಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕುಳಿತು ಬೇಸತ್ತರು.
ಇದರ ಪ್ರಭಾವವು ಯಶವಂತಪುರದಿಂದ ಸಿಲ್ಕ್ ಬೋರ್ಡ್ ವರೆಗಿನ ಇತರ ನಿಲ್ದಾಣಗಳ ಮೇಲೂ ಬೀರಿದ್ದು, ಮೆಟ್ರೋ ರೈಲುಗಳು ನಿಗದಿತ ಸಮಯಕ್ಕೆ ಬಾರದೆ ವೇಳಾಪಟ್ಟಿ ಸಂಪೂರ್ಣ ಏರುಪೇರಾಯಿತು. ನಂತರ ತುರ್ತಾಗಿ ವಿದ್ಯುತ್ ಪೂರೈಕೆಯನ್ನು ಯಥಾಸ್ಥಿತಿಗೆ ತಂದು, ಬೆಳಗ್ಗೆ 8:55ರ ಬಳಿಕ ರೈಲು ಸಂಚಾರವನ್ನು ಹಂತ ಹಂತವಾಗಿ ಪುನರಾರಂಭಿಸಲಾಯಿತು.
ಆದರೂ ಬೆಳಗಿನ ಸಮಯದಲ್ಲಿ ಉಂಟಾದ ವ್ಯತ್ಯಯದಿಂದ ಪ್ರಯಾಣಿಕರು ಪ್ರಯಾಣದ ತೊಂದರೆ ಅನುಭವಿಸುವಂತಾಯಿತು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII