ಬಹುಮಹಡಿ ಕಟ್ಟಡಗಳ ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಅಂಗವಿಕಲರ ಕಡ್ಡಾಯ ನೇಮಕಕ್ಕೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸಮ್ಮತಿ
ವಿಜಯಪುರ, 21 ಜುಲೈ (ಹಿ.ಸ.) ಆ್ಯಂಕರ್ : ಬಹುಮಹಡಿ ಕಟ್ಟಡಗಳಲ್ಲಿನ ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಕಡ್ಡಾಯವಾಗಿ ಅಂಗವಿಕಲರನ್ನು ನೇಮಕ ಮಾಡಬೇಕೆಂಬ ಮಹತ್ವದ ಪ್ರಸ್ತಾವಕ್ಕೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಈ ಮೂಲಕ ಅಂಗವಿಕಲರಿಗೆ ಉದ್ಯೋಗಾವಕಾಶ ಕಲ್ಪ
ಬಸ್ಸ್


ವಿಜಯಪುರ, 21 ಜುಲೈ (ಹಿ.ಸ.)

ಆ್ಯಂಕರ್ : ಬಹುಮಹಡಿ ಕಟ್ಟಡಗಳಲ್ಲಿನ ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಕಡ್ಡಾಯವಾಗಿ ಅಂಗವಿಕಲರನ್ನು ನೇಮಕ ಮಾಡಬೇಕೆಂಬ ಮಹತ್ವದ ಪ್ರಸ್ತಾವಕ್ಕೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಈ ಮೂಲಕ ಅಂಗವಿಕಲರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಮಟ್ಟದಲ್ಲಿ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ.

ಸಭೆಯಲ್ಲಿ ಈ ಪ್ರಸ್ತಾವ ಮಂಡಿಸಿದ ಶಾಸಕ ಸುನೀಲ್ಗೌಡ ಪಟೇಲ್, ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು, ಮಾಲ್ಗಳು ಸೇರಿದಂತೆ ಎಲ್ಲ ಬಹುಮಹಡಿ ಕಟ್ಟಡಗಳಲ್ಲಿ ಲಿಫ್ಟ್ ಆಪರೇಟರ್ ಹುದ್ದೆಗಳಿಗೆ ಅಂಗವಿಕಲರನ್ನೇ ಕಡ್ಡಾಯವಾಗಿ ನೇಮಿಸುವಂತೆ ಸರ್ಕಾರ ನಿಯಮ ರೂಪಿಸಬೇಕೆಂದು ಒತ್ತಾಯಿಸಿದರು. ಈ ಪ್ರಸ್ತಾವಕ್ಕೆ ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಸರ್ವಾನುಮತದಿಂದ ಬೆಂಬಲ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಅವರು, ಮುಂಬರುವ ವಿಧಾನ ಪರಿಷತ್ ಅಧಿವೇಶನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅಂಗವಿಕಲರಿಗೆ ಉದ್ಯೋಗ ಸೃಷ್ಟಿಸುವ ಜೊತೆಗೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಪ್ರಸ್ತಾವವನ್ನು ಮಂಡಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಮಹಾನಗರಗಳಲ್ಲಿ ಈಗಾಗಲೇ ಅಂಗವಿಕಲರು ಯಶಸ್ವಿಯಾಗಿ ಲಿಫ್ಟ್ ಆಪರೇಟರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವುದರ ಜೊತೆಗೆ ಲಿಫ್ಟ್ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಉತ್ತಮ ಮಾದರಿಯಾಗಿದ್ದಾರೆ ಎಂದು ಅವರು ವಿವರಿಸಿದರು.

ಈ ರೀತಿಯ ವ್ಯವಸ್ಥೆಯನ್ನು ವಿಜಯಪುರ ಜಿಲ್ಲೆಯಿಂದಲೇ ಆರಂಭಿಸಿದರೆ, ಅದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ವಿಸ್ತರಿಸಿ ಅಂಗವಿಕಲರ ಸಬಲೀಕರಣಕ್ಕೆ ಹೊಸ ದಿಕ್ಕು ತೋರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು. ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಈ ಕ್ರಮ ಸಹಕಾರಿಯಾಗಲಿದ್ದು, ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಸಾಮಾಜಿಕ ಉಪಕ್ರಮವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಧೋಂಡಿಬಾ ಕಟಕದೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ವಿಷಯದ ಕುರಿತು ಚರ್ಚಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಅಂಗವಿಕಲರಿಗೆ ಗೌರವಯುತ ಉದ್ಯೋಗಾವಕಾಶ ಕಲ್ಪಿಸುವ ಈ ಪ್ರಸ್ತಾವಕ್ಕೆ ಸರ್ವಾನುಮತದ ಬೆಂಬಲ ದೊರೆತಿರುವುದು ವಿಜಯಪುರ ಜಿಲ್ಲೆಯ ಸಾಮಾಜಿಕ ಕಾಳಜಿ ಮತ್ತು ಸಮಾನ ಅವಕಾಶದ ಬದ್ಧತೆಯನ್ನು ಪ್ರತಿಬಿಂಬಿಸುವ ಮಹತ್ವದ ಬೆಳವಣಿಗೆಯಾಗಿದೆ

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande