
ನವದೆಹಲಿ, 21 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವುಗೊಳಿಸಲು ತೆರಳಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತೀವ್ರವಾಗಿ ಖಂಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುವವರ ಮೇಲೆ ಹಲ್ಲೆ ನಡೆಸಿರುವುದು ಗಂಭೀರ ಅಪರಾಧ ಎಂದಿದ್ದಾರೆ. ಸರ್ಕಾರಿ ನೌಕರರ ಬೆನ್ನಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಲಿದ್ದು, ಇಂತಹ ದೌರ್ಜನ್ಯ ಎಸಗಿದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಎಸಗಲು ಹೆದರುವಂತೆ ಕಠಿಣ ಕಾನೂನು ದಂಡನೆ ಕೊಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಘಟನೆಯ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹಾಗೂ ಪೊಲೀಸ್ ಇಲಾಖೆ, ಹಲ್ಲೆಕೋರರ ವಿರುದ್ಧ ಕಠಿಣ ಪ್ರಕರಣ ದಾಖಲಿಸಿ ಈಗಾಗಲೇ ಪ್ರಮುಖ ಆರೋಪಿಗಳನ್ನು ಸೇರದಿಂತ ಒಟ್ಟು 10 ಜನರನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ಹಾಗೂ ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಉಳಿದವರಿಗಾಗಿ ತನಿಖೆ ಮುಂದುವರಿದಿದೆ. ಮತ್ತೊಂದೆಡೆ, ನೌಕರರ ಸಂಘಟನೆಗಳ ಸುರಕ್ಷತೆ ನೀಡುವ ಬೇಡಿಕೆಗೆ ಸರ್ಕಾರ ಸಂಪೂರ್ಣ ಭರವಸೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII