








ಕೊಪ್ಪಳ, 21 ಜುಲೈ (ಹಿ.ಸ.)
ಆ್ಯಂಕರ್: ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಕೊಪ್ಪಳ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಸನ್ 2025 ಮತ್ತು 2026 ನೇ ಸಾಲಿನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮುದ್ದೆಮಾಲನ್ನು ವಾರಸುದಾರರಿಗೆ ಹಿಂದಿರುಗಿಸುವ ಮತ್ತು ಪೋಲೀಸ್ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಡಾ. ಪಿ.ಎಸ್. ಹರ್ಷ ಅವರು ಸಂಬಂಧಿಸಿದ ವಾರಸುದಾರರಿಗೆ ವಾಹನಗಳು, ಬಂಗಾರ ಮತ್ತು ಬೆಳ್ಳಿಯ ಒಡವೆಗಳು, ಮೊಬೈಲ್ ಪೋನ್ ಹಾಗೂ ನಗದು ಹಣ ಸೇರಿದಂತೆ ಮುದ್ದೆಮಾಲನ್ನು ಹಿಂದಿರುಗಿಸಿ, 2025 ಮತ್ತು 2026ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ದಾಖಲಾಗಿದ್ದ ಕಳ್ಳತನ, ದರೋಡೆಯಂತಹ ಸ್ವತ್ತಿನ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ತಂಡ ತೋರಿದ ದಕ್ಷತೆ ಮತ್ತು ತಾಂತ್ರಿಕ ಕೌಶಲ್ಯವನ್ನು ಅವರು ಶ್ಲಾಘಿಸಿದರು.
ಬಳಿಕ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಅಧಿಕ ಅಂಕಗಳನ್ನು ಪಡೆದ ಪೊಲೀಸ್ ಕುಟುಂಬದ ಸುಮಾರು 53 ವಿದ್ಯಾರ್ಥಿಗಳಿಗೆ ಐಜಿಯವರು ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಡಾ. ಪಿ.ಎಸ್. ಹರ್ಷ ಅವರು, ಕೊಪ್ಪಳ ಜಿಲ್ಲೆಯಲ್ಲಿ ಸ್ವತ್ತು ಕಳುವಾದ 252 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 104 ಪ್ರಕರಣಗಳನ್ನು ಪತ್ತೆ ಮಾಡಿ ಕಳುವಾದ ಮಾಲಿನ ಪೈಕಿ ಒಟ್ಟು ರೂ.1,82,45,960 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ ಎಂದರು.
ಈ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಸೈಬರ್ ಅಪರಾಧಗಳಲ್ಲಿ ಪತ್ತೆಯಾದ ರೂ. 33,49,662 ಗಳು, ಸಿ.ಇ.ಐ.ಆರ್. ಪೋರ್ಟಲ್ ಮೂಲಕ ಪತ್ತೆಹಚ್ಚಲಾದ 1905 ಮೊಬೈಲ್ ಗಳು, 988.960 ಗ್ರಾಂ ಚಿನ್ನದ ಆಭರಣಗಳು, 10 ಕೆಜಿ ಬೆಳ್ಳಿ ಆಭರಣಗಳು, ರೂ. 43,33,830 ನಗದು ಹಣ, 6 ನಾಲ್ಕು ಚಕ್ರ ವಾಹನಗಳು, 3 ತ್ರಿಚಕ್ರ ವಾಹನಗಳು ಹಾಗೂ 34 ದ್ವಿಚಕ್ರ ವಾಹನಗಳು (ಮೋಟಾರ್ ಸೈಕಲ್ಗಳು), ಈ ಎಲ್ಲಾ ಮಾಲನ್ನು ಫಿರ್ಯಾದಿದಾರರಿಗೆ, ವಾರಸುದಾರರಿಗೆ ತ್ವರಿತವಾಗಿ ಹಿಂತಿರುಗಿಸಲಾಗಿದ್ದು, ಸಂತೋಷದ ವಿಚಾರವಾಗಿದೆ. ಕಳೆದುಹೋದ ಸಾರ್ವಜನಿಕರ ಬೆಲೆಬಾಳುವ ಆಸ್ತಿಯನ್ನು ಪತ್ತೆಹಚ್ಚಿ, ಕಾನೂನು ಪ್ರಕ್ರಿಯೆಗಳ ಮೂಲಕ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ವಾರಸುದಾರರಿಗೆ ಮರಳಿ ನೀಡುತ್ತಿರುವುದು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ಗೌರವ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
*ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮ:* ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ರಾತ್ರಿ ಗಸ್ತು ಚುರುಕುಗೊಳಿಸುವುದು, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಹಾಗೂ ಹಳೇ ಅಪರಾಧಿಗಳ ಮೇಲೆ ತೀವ್ರ ನಿಗಾ ಇಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯು ದಕ್ಷತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮಾದಕ ವಸ್ತುಗಳ ವಿರುದ್ದ ಸಮರ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ನಶೆ ಮುಕ್ತ ಕರ್ನಾಟಕದ ಅಭಿಯಾನವನ್ನು ರಾಜ್ಯದ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದು, ಯುವ ಜನತೆಗೆ ಮಾದಕ ವ್ಯಸನದ ದುಷ್ಪರಿಣಾಮದ ಅರಿವು ಮೂಡಿಸಲಾಗುತ್ತಿದೆ ಎಂದರು.
*ವಾರಸುದಾರರ ಹರ್ಷ:* ತಾವೇ ಆಸೆಪಟ್ಟು ಕೊಂಡುಕೊಂಡಿದ್ದ, ಕಳ್ಳರ ಪಾಲಾಗಿದ್ದ ಒಡವೆ ಹಾಗೂ ವಾಹನಗಳು ಬಹು ದಿನಗಳ ನಂತರ ಕೈಸೇರುತ್ತಿದ್ದಂತೆ ಸಾರ್ವಜನಿಕರ ಮುಖದಲ್ಲಿ ನೆಮ್ಮದಿಯ ನಗು ಕಂಡುಬಂದಿತು. ಪೊಲೀಸ್ ಇಲಾಖೆಯ ಈ ಪ್ರಾಮಾಣಿಕ ಹಾಗೂ ತ್ವರಿತ ಪ್ರಯತ್ನಕ್ಕೆ ಸಾರ್ವಜನಿಕರು ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
*ಮೊಬೈಲ್ ಫೋರೆನ್ಸಿಕ್ ಲ್ಯಾಬ್ ವಾಹನಕ್ಕೆ ಚಾಲನೆ:* ಮೊಬೈಲ್ ಫೋರೆನ್ಸಿಕ್ ಲ್ಯಾಬ್ ಕೊಪ್ಪಳ ಜಿಲ್ಲಾ ಪೊಲೀಸ್ ವಾಹನಕ್ಕೆ ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, ದಿನಾಂಕ:01-01-2025 ರಿಂದ 30-06-2026ರ ವರೆಗೆ ಡಕಾಯಿತಿ, ದರೋಡೆ, ಸರಗಳ್ಳತನ, ಮನೆ ಕಳ್ಳತನ, ಜಾನುವಾರು ಕಳ್ಳತನ, ಇತರೆ ಕಳ್ಳತನ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಸ್ವತ್ತು ಕಳುವಾದ 252 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 104 ಪ್ರಕರಣಗಳನ್ನು ಪತ್ತೆ ಮಾಡಿ ಕಳುವಾದ ಮಾಲಿನ ಪೈಕಿ ಒಟ್ಟು ರೂ.1,82,45,960 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ನಮ್ಮ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಈ ಎಲ್ಲಾ ಮುದ್ದೆಮಾಲನ್ನು ಐಜಿ ಡಾ. ಪಿ.ಎಸ್. ಹರ್ಷ ರವರ ನೇತೃತ್ವದಲ್ಲಿ ಇಂದು ಸಂಬಂಧಿಸಿದ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಐಜಿಯವರು ಯಾವಾಗಲೂ ಪೊಲೀಸರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ನಮಗೆ ಮಾರ್ಗದರ್ಶನವನ್ನು ಮಾಡುತ್ತಿರುತ್ತಾರೆ. ಹಾಗಾಗಿ ನಮ್ಮ ಜಿಲ್ಲೆಯ ಪೊಲೀಸ್ ಸಿಬ್ಬಂದಿಯ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಅಧಿಕ ಅಂಕಗಳನ್ನು ಪಡೆದಿರುವ 53 ವಿದ್ಯಾರ್ಥಿಗಳಿದ್ದು, ಅವರಿಗೆ ನೆನಪಿನ ಕಾಣಿಕೆ ಮತ್ತು ಪ್ರಶಂಸನಾ ಪತ್ರ ನೀಡುವ ಮೂಲಕ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಹೇಮಂತ್ ಕುಮಾರ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಜೆ.ನ್ಯಾಮನಗೌಡರ, ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಡಿಎಆರ್ ಡಿವೈಎಸ್ಪಿ ಶಶಿಧರಯ್ಯ ಹಿರೇಮಠ, ಸೇರಿದಂತೆ ಜಿಲ್ಲೆಯ ಇತರೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಕುಟುಂಬಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್