
ತುಮಕೂರು, 21 ಜುಲೈ (ಹಿ.ಸ.):
ಆ್ಯಂಕರ್:
ಬಿಗ್ ಬಾಸ್ ಮನೆ ಪ್ರವೇಶಿಸಲು ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಜಾಲತಾಣದ ತಾರೆಯರು ನಾನಾ ಕಸರತ್ತು ಮಾಡುವುದು ಸಾಮಾನ್ಯ. ಆದರೆ, 260ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಖ್ಯಾತ ಕಳ್ಳ ಶಿಗ್ಲಿ ಬಸ್ಯಾ ಮುಂಬರುವ 'ಬಿಗ್ ಬಾಸ್ ಸೀಸನ್ 13'ರಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ ತುಮಕೂರಿನಿಂದ ಬಿಡದಿಯ ಬಿಗ್ ಬಾಸ್ ಮನೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಮಂಗಳವಾರ ತುಮಕೂರಿನ ಇತಿಹಾಸ ಪ್ರಸಿದ್ಧ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಶಿಗ್ಲಿ ಬಸ್ಯಾ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ತನ್ನ ಪಾದಯಾತ್ರೆಗೆ ಚಾಲನೆ ನೀಡಿದ್ದಾನೆ. ಕೈಯಲ್ಲಿ ಕನ್ನಡ ಧ್ವಜ ಹಿಡಿದುಕೊಂಡು ಏಕಾಂಗಿಯಾಗಿ ಹೆಜ್ಜೆ ಹಾಕುತ್ತಿರುವ ಈತನ ಪಾದಯಾತ್ರೆ ಸತತ ಎರಡು ದಿನಗಳ ಕಾಲ ನಡೆಯಲಿದೆ. ಬಿಡದಿಗೆ ತಲುಪಿದ ಬಳಿಕ, ಬಿಗ್ ಬಾಸ್ ನಿರೂಪಕ ಹಾಗೂ ನಟ ಕಿಚ್ಚ ಸುದೀಪ್ ಅವರನ್ನು ಖುದ್ದಾಗಿ ಭೇಟಿಯಾಗಿ, ತನಗೆ ಶೋನಲ್ಲಿ ಒಂದು ಅವಕಾಶ ನೀಡುವಂತೆ ಮನವಿ ಮಾಡಲು ಬಸ್ಯಾ ನಿರ್ಧರಿಸಿದ್ದಾನೆ.
ಯಾರಿದು ಶಿಗ್ಲಿ ಬಸ್ಯಾ?
ರಾಜ್ಯದ ವಿವಿಧೆಡೆ 260ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ, ತನ್ನ ಮೇಲಿದ್ದ ಕೇಸ್ಗಳಿಗೆ ವಕೀಲರನ್ನು ಇಟ್ಟುಕೊಳ್ಳದೆ ಕೋರ್ಟ್ನಲ್ಲಿ ತಾನೇ ಖುದ್ದಾಗಿ ವಾದ ಮಂಡಿಸಿ ಕೇಸ್ ಗೆದ್ದಿರುವ ಕುತೂಹಲಕಾರಿ ಇತಿಹಾಸ ಹೊಂದಿದ್ದಾನೆ. ಇದೀಗ ಅಪರಾಧ ಹಿನ್ನೆಲೆಯಿಂದ ಸಂಪೂರ್ಣವಾಗಿ ಹೊರಬಂದು, ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಬಿಗ್ ಬಾಸ್ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII