



ಕೊಪ್ಪಳ, 21 ಜುಲೈ (ಹಿ.ಸ.)
ಆ್ಯಂಕರ್ : ವಿಜಯನಗರ ಎಡದಂಡೆ ಮುಖ್ಯ ಕಾಲುವೆ 11-ಎ ವಿತರಣಾ ಕಾಲುವೆವರೆಗೆ ತಕ್ಷಣ 1.5 ಟಿಎಂಸಿ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಮತ್ತು ಜನಪ್ರತಿನಿಧಿಗಳ ನಿಯೋಗ ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮುನಿರಾಬಾದ್ ತುಂಗಭದ್ರಾ ಜಲಾಶಯದ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಕೈಗೊಂಡ ತೀರ್ಮಾನದಂತೆ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಡಾ. ಬಸವರಾಜ್ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿಯಾದರು.
ಕೊರಗಲ್ ಅಣೆಕಟ್ಟಿನ ಕಾಲುವೆಗಳ ಹಕ್ಕಿನಡಿ ವಿಜಯನಗರ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿಭೂಮಿಗೆ ಶತಮಾನಗಳಿಂದ ನೀರು ಪೂರೈಕೆಯಾಗುತ್ತಿದೆ. ಈ ಭಾಗದ ರೈತರು, ಜನರು ಮತ್ತು ಜಾನುವಾರುಗಳು ಇದೇ ನೀರನ್ನು ಅವಲಂಬಿಸಿ ಬದುಕುತ್ತಿವೆ ಎಂದು ನಿಯೋಗ ಜಿಲ್ಲಾಧಿಕಾರಿಗಳಿಗೆ ವಿವರಿಸಿತು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು ವಿಜಯನಗರ ಕಾಲುವೆಗಳ ವಾರ್ಷಿಕ 5.71 ಟಿಎಂಸಿ ಐತಿಹಾಸಿಕ ನೀರಿನ ಬಳಕೆಯನ್ನು ಅಧಿಕೃತವಾಗಿ ಗುರುತಿಸಿದೆ. ಹೊಸ ಯೋಜನೆಗಳಿಗಿಂತ ಈ ಐತಿಹಾಸಿಕ ಬಳಕೆಗೆ ಆದ್ಯತೆ ನೀಡಬೇಕೆಂದೂ ನ್ಯಾಯಮಂಡಳಿ ತಿಳಿಸಿದೆ ಎಂದು ನಿಯೋಗ ಮನವಿಯಲ್ಲಿ ಉಲ್ಲೇಖಿಸಿತು. ಹೀಗಾಗಿ ವಿಜಯನಗರ ಎಡದಂಡೆಯ 11-ಎ ಉಪ ಕಾಲುವೆವರೆಗೆ 1.5 ಟಿಎಂಸಿ ನೀರು ಬಿಡುಗಡೆ ಮಾಡುವುದು ಈ ಭಾಗದ ರೈತರ ಐತಿಹಾಸಿಕ ಮತ್ತು ಕಾನೂನುಬದ್ಧ ಹಕ್ಕು ಎಂದು ನಿಯೋಗ ಪ್ರತಿಪಾದಿಸಿತು. ರೈತರ ಹಕ್ಕಿಗೆ ಧಕ್ಕೆಯಾಗದಂತೆ ತಕ್ಷಣ 11-ಎ ವಿತರಣಾ ಕಾಲುವೆಯ ಕೊನೆಯ ಭಾಗದವರೆಗೂ ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ನಿಯೋಗದ ಪ್ರಮುಖ ಬೇಡಿಕೆಗಳು
* ವಿಜಯನಗರ ಎಡದಂಡೆಯ 11-ಎ ಕಾಲುವೆಗೆ ತಕ್ಷಣ ನೀರು ಬಿಡುಗಡೆ ಮಾಡಬೇಕು.
* 11-ಎ ವಿತರಣಾ ಕಾಲುವೆವರೆಗೆ ಕೊನೆಯ ಭಾಗದವರೆಗೂ ನೀರು ತಲುಪಿಸಬೇಕು.
* ಕೊರಗಲ್ ಅಣೆಕಟ್ಟು ಕಾಲುವೆಗಳ ಐತಿಹಾಸಿಕ ನೀರಿನ ಹಕ್ಕನ್ನು ರಕ್ಷಿಸಬೇಕು.
* ಕೃಷ್ಣಾ ನ್ಯಾಯಮಂಡಳಿ ಗುರುತಿಸಿರುವ 5.71 ಟಿಎಂಸಿ ನೀರಿನ ಬಳಕೆಗೆ ಆದ್ಯತೆ ನೀಡಬೇಕು.
* ಮೊದಲ ಹಂತದಲ್ಲಿ 11-ಎ ಕಾಲುವೆವರೆಗೆ 1.5 ಟಿಎಂಸಿ ನೀರು ಹರಿಸಬೇಕು.
ನಿಯೋಗದಲ್ಲಿ ನವೀನ ಗುಳಗಣ್ಣವರ್, ಪ್ರಭುರಾಜ ಪಾಟೀಲ್, ಪ್ರದೀಪ್ ಹಿಟ್ನಾಳ, ಸುನಿಲ್ ಹೆಸರೂರು, ಅಶೋಕ ಗುಲದಳ್ಳಿ, ಬಸವರಾಜ್ ಉಳ್ಳಾಗಡ್ಡಿ , ಖಾಜಾ ಹುಸೇನ್ ಹೊಸಳ್ಳಿ ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್