ರಾಜ್ಯಪಾಲರ ಪ್ರವಾಸ, ಶಿಷ್ಟಾಚಾರ ಪಾಲನೆಯಲ್ಲಿ ನಿರ್ಲಕ್ಷ್ಯ ಸಹಿಸಲಾಗದು: ಡಿಸಿ
ಗದಗ, 21 ಜುಲೈ (ಹಿ.ಸ.) ಆ್ಯಂಕರ್: ಜುಲೈ 23ರಂದು ರಾಜ್ಯಪಾಲರ ಗಜೇಂದ್ರಗಡ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಪೂರ್ವಸಿದ್ಧತಾ ಹಾಗೂ ಶಿಷ್ಟಾಚಾರ ಸಭೆ ನಡೆಯಿತು. ರಾಜ್ಯಪಾಲರ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳು
ಫೋಟೋ


ಗದಗ, 21 ಜುಲೈ (ಹಿ.ಸ.)

ಆ್ಯಂಕರ್: ಜುಲೈ 23ರಂದು ರಾಜ್ಯಪಾಲರ ಗಜೇಂದ್ರಗಡ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಪೂರ್ವಸಿದ್ಧತಾ ಹಾಗೂ ಶಿಷ್ಟಾಚಾರ ಸಭೆ ನಡೆಯಿತು.

ರಾಜ್ಯಪಾಲರ ಪ್ರವಾಸಕ್ಕೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳು ಶಿಷ್ಟಾಚಾರದಂತೆ ಹಾಗೂ ಯಾವುದೇ ಲೋಪವಿಲ್ಲದಂತೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಪ್ರವಾಸದ ವೇಳೆ ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ನಡೆಯಬಾರದು. ಅಧಿಕಾರಿಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಅವ್ಯವಸ್ಥೆ ಅಥವಾ ಲೋಪ ಕಂಡುಬಂದರೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯಪಾಲರು ಸಂಚರಿಸುವ ಮಾರ್ಗದ ರಸ್ತೆಗಳು ಸಂಪೂರ್ಣ ಸುಸ್ಥಿತಿಯಲ್ಲಿರುವಂತೆ ಸಂಬಂಧಿಸಿದ ಇಲಾಖೆಗಳು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆ ಮಾರ್ಗದಲ್ಲಿ ಯಾವುದೇ ಅಡಚಣೆ ಅಥವಾ ಸಂಚಾರ ದಟ್ಟಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಗಜೇಂದ್ರಗಡ ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಸಾಧ್ಯತೆ ಇರುವುದರಿಂದ, ಜನಸಂದಣಿ ನಿಯಂತ್ರಣ, ವಾಹನ ನಿಲುಗಡೆ, ಕುಡಿಯುವ ನೀರು, ಆರೋಗ್ಯ ಸೇವೆ, ಭದ್ರತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ತಿಳಿಸಿದರು. ಅಗತ್ಯವಿದ್ದಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಸಾರ್ವಜನಿಕರಿಗೆ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ವೇದಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಹೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಬ್ಯಾಕಪ್ ವ್ಯವಸ್ಥೆಯನ್ನೂ ಸಿದ್ಧವಾಗಿಟ್ಟುಕೊಳ್ಳುವಂತೆ ನಿರ್ದೇಶನ ನೀಡಿದರು.

ಅದೇ ರೀತಿ, ರಾಜ್ಯಪಾಲರ ಭದ್ರತೆ, ಶಿಷ್ಟಾಚಾರ, ವೈದ್ಯಕೀಯ ನೆರವು, ಸ್ವಚ್ಛತೆ, ಕುಡಿಯುವ ನೀರು, ಅಗ್ನಿಶಾಮಕ, ಸಂಚಾರ ನಿಯಂತ್ರಣ ಸೇರಿದಂತೆ ಪ್ರತಿಯೊಂದು ವಿಭಾಗವೂ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ರಾಜ್ಯಪಾಲರ ಪ್ರವಾಸದ ವೇಳಾಪಟ್ಟಿ

ಸಭೆಯಲ್ಲಿ ರಾಜ್ಯಪಾಲರ ಪ್ರವಾಸದ ವಿವರಗಳನ್ನು ತಿಳಿಸಲಾಯಿತು. ಕರ್ನಾಟಕದ ರಾಜ್ಯಪಾಲರು ಜುಲೈ 23ರಂದು ಬೆಳಿಗ್ಗೆ 9.15ಕ್ಕೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸಿ ಬೆಳಿಗ್ಗೆ 10.50ಕ್ಕೆ ಗಜೇಂದ್ರಗಡ ಪ್ರವಾಸಿ ಮಂದಿರಕ್ಕೆ ತಲುಪಲಿದ್ದಾರೆ. ನಂತರ ಬೆಳಿಗ್ಗೆ 11.15ಕ್ಕೆ ಗಜೇಂದ್ರಗಡದ ಟಿಟಿಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಲಿರುವ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2 ಗಂಟೆಗೆ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಸಭೆಗೆ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ ಆರ್ ಮಾಹಿತಿ ವದಗಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಪೋಲಿಸ್ ಇಲಾಖೆಯ ಡಿವೈಎಸ್ಪಿಗಳಾದ ಮಹಾಂತೇಶ್ ಸಜ್ಜನರ ಹಾಗೂ ಮುರ್ತುಜಾ ಖಾದ್ರಿ, ಸಹಾಯಕ ಆಯುಕ್ತ ಗಂಗಪ್ಪ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande