
ಕೊಪ್ಪಳ , 21 ಜುಲೈ (ಹಿ.ಸ.)
ಆ್ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೂತ್ ಮಟ್ಟದ ಅಧಿಕಾರಿಗೆ ಅಗತ್ಯ ಮಾಹಿತಿ ನೀಡಲು ಸಹಕರಿಸಬೇಕೆಂದು ಕೊಪ್ಪಳ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗು ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಕರೆ ನೀಡಿದರು.
ಕೊಪ್ಪಳ ತಾಲೂಕ ಸ್ವೀಪ್ ಸಮಿತಿ ಹಾಗೂ ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಮತದಾರರ ಸಾಕ್ಷರತಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಜು. 21ರಂದು) ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ವಿದ್ಯಾರ್ಥಿನಿಯರಿಂದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮದ ಮೂಲಕ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಹಾಗೂ ಮರಣ ಹೊಂದಿರುವವರು, ಸ್ಥಳಾಂತರಗೊಂಡಿರುವವರು, ನಕಲು ಹೆಸರುಗಳು, ಮತ್ತು ಇತರ ಅನರ್ಹ ಮತದಾರರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಇದರ ಉದ್ದೇಶವಾಗಿದೆ.
ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಮತದಾರರು ಎಸ್ಐಆರ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದರು. ಬೂತ್ ಮಟ್ಟದ ಅಧಿಕಾರಿಯು ಪ್ರತಿ ಮನೆಗೆ 3 ಬಾರಿ ಭೇಟಿ ನೀಡಲಿದ್ದಾರೆ. ಅಗತ್ಯ ಮಾಹಿತಿಯನ್ನು ಪ್ರತಿಯೊಬ್ಬರು ಸಲ್ಲಿಸಲು ಇದೊಂದು ಸದಾವಕಾಶ ಹಾಗು ಹೊಸದಾಗಿ ಸೇರ್ಪಡೆಗೆ ಅವಕಾಶವಿದೆ ಎಂದರು.
ವಿದ್ಯಾರ್ಥಿನಿಯರಿಂದ ಕಾಲ್ನಡಿಗೆ ಜಾಗೃತಿ ಜಾಥಾವು ಕಾಲೇಜಿನಿಂದ ಪ್ರಾರಂಭವಾಗಿ ಮುಂಡರಗಿ ಭೀಮರಾಯ ಸರ್ಕಲ್, ಅಶೋಕ ಸರ್ಕಾಲ್, ದಿವಟರ ಸರ್ಕಲ್, ಮೇದಾರ ಓಣಿಯ ಮುಖಾಂತರ ಕಾಲೇಜಿನವರೆಗೆ ಜರುಗಿತು. ಬಟಿಂಗ್ಸ್ ಪ್ರದರ್ಶನದಿಂದ ಕಾಲ್ನಡಿಗೆ ಜಾಥಾಕ್ಕೆ ಮೆರಗು ತಂದಿತು. 650 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರರಾದ ಶಿವಾನಂದ ಎ.ಆರ್., ಉಪ ಪ್ರಾಂಶುಪಾಲರಾದ ವಿ.ಜಿ ಸೂಡಿಮಠ, ಪಂಚಾಯತ ರಾಜ್ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ಮಹೇಶ್, ಚುನಾವಣಾ ಸಾಕ್ಷರತಾ ಸಂಘದ ಕಾರ್ಯಕ್ರಮ ಅಧಿಕಾರಿ ಸಿದ್ದಪ್ಪ ಮೇಳಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪರಶುರಾಮ್ ಕೆ., ಉಪನ್ಯಾಸಕ ಮಂಜುನಾಥ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್