
ಬಾಗಲಕೋಟೆ, 21 ಜುಲೈ (ಹಿ.ಸ.):
ಆ್ಯಂಕರ್ : ಮತದಾರರ ಪಟ್ಟಿಯನ್ನು ಹೆಚ್ಚು ಪಾರದರ್ಶಕ, ನಿಖರ ಹಾಗೂ ವಿಶ್ವಾಸಾರ್ಹವಾಗಿಸುವ ಉದ್ದೇಶದಿಂದ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ನಾಗರಿಕರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಕರೆ
ನೀಡಿದರು.
ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ಗ್ರಾಮೀಣ ಮಂಡಲದ ವತಿಯಿಂದ ರಾಂಪೂರ ಹಾಗೂ ಅಚನೂರ ಗ್ರಾಮಗಳಲ್ಲಿ ಆಯೋಜಿಸಿದ್ದ ಎಸ್.ಐ.ಆರ್. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸುವುದು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು, ಹೊಸ ಅರ್ಹ ಮತದಾರರ ಹೆಸರು ಸೇರ್ಪಡೆ, ಸ್ಥಳಾಂತರಗೊಂಡಿರುವವರ ವಿವರಗಳನ್ನು ನವೀಕರಿಸುವುದು ಸೇರಿದಂತೆ ಎಲ್ಲ ಕಾರ್ಯಗಳನ್ನು ನಿಯಮಾನುಸಾರ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಎಸ್.ಐ.ಆರ್. ಪ್ರಕ್ರಿಯೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಹೆಸರುಗಳು ಉಳಿಯದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ ಕೊಣ್ಣೂರ, ಸಂಗಣ್ಣ ಕಲಾದಗಿ, ರಾಜು ಮುದೆನೂರ, ಮುತ್ತು ಸಿಮಿಕೇರಿ, ಮಲ್ಲು ಮುತ್ತಪ್ಪನವರ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಎಸ್.ಐ.ಆರ್. ಪ್ರಕ್ರಿಯೆಯ ಯಶಸ್ಸಿಗೆ ಸಂಘಟಿತವಾಗಿ ಕೆಲಸ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವಿಧಾನ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ಕ್ರಮ ಹಾಗೂ ಸಾರ್ವಜನಿಕರು ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande