
ಬೆಂಗಳೂರು, 21 ಜುಲೈ (ಹಿ.ಸ.):
ಆ್ಯಂಕರ್:ಜಕ್ಕೂರಿನ ಸರ್ಕಾರಿ ಫ್ಲೈಯಿಂಗ್ ತರಬೇತಿ ಶಾಲೆ (ಜಿಎಫ್‌ಟಿಎಸ್) ಸ್ಥಳಾಂತರದ ಪ್ರಯತ್ನವನ್ನು ಬಿಜೆಪಿ ತಡೆದಿದ್ದು, ಇದೀಗ ಶಾಲೆಗೆ 2026–2031ರವರೆಗೆ ಪರವಾನಗಿ ನವೀಕರಣಗೊಂಡಿರುವುದು ಸಾರ್ವಜನಿಕ ಜಾಗೃತಿಯ ಗೆಲುವು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಎಕ್ಸ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಕಾಂಗ್ರೆಸ್ ಸರ್ಕಾರ ಕ್ರೀಡಾ ಸಂಕೀರ್ಣ ನಿರ್ಮಾಣದ ಹೆಸರಿನಲ್ಲಿ ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಅನ್ನು ಸ್ಥಳಾಂತರಿಸಲು ಯತ್ನಿಸಿತ್ತು ಎಂದು ಆರೋಪಿಸಿದ ಅವರು, ಇದರ ಹಿಂದೆ ಸಾರ್ವಜನಿಕ ಭೂಮಿಯನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಬಳಸುವ ಉದ್ದೇಶವಿತ್ತು ಎಂದು ದೂರಿದ್ದಾರೆ.
ಡಿಜಿಸಿಎ ಶಾಲೆಯ ಪರವಾನಗಿಯನ್ನು ಮುಂದಿನ ಐದು ವರ್ಷಗಳಿಗೆ ನವೀಕರಿಸಿರುವುದರಿಂದ ಹಾರಾಟ ತರಬೇತಿ ಚಟುವಟಿಕೆಗಳು ಪುನರಾರಂಭವಾಗಲಿದ್ದು, ಜಕ್ಕೂರು ತನ್ನ ಐತಿಹಾಸಿಕ ವಿಮಾನಯಾನ ಪರಂಪರೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಭೂಮಿ ಮತ್ತು ಪರಂಪರೆಯ ಸಂಸ್ಥೆಗಳನ್ನು ಯಾವುದೇ ಹಿತಾಸಕ್ತಿಗಳಿಗೆ ಬಲಿಯಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ. ಇಂತಹ ಪ್ರತಿಯೊಂದು ಪ್ರಯತ್ನಕ್ಕೂ ತೀವ್ರ ವಿರೋಧ ಮುಂದುವರಿಯಲಿದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.