
ಕೊಪ್ಪಳ, 21 ಜುಲೈ (ಹಿ.ಸ.)
ಆ್ಯಂಕರ್ : ತಾಲೂಕಿನ ಹಲುವಾಗಲಿ ಸೀಮಾದ ತುಂಗಭದ್ರ ನದಿಯ ಹಿನ್ನೀರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮರಳು ಸಂಗ್ರಹಿಸಿ ಕಳ್ಳತನ ಮಾಡಲು ಯತ್ನಿಸುತ್ತಿದ್ದ ದಂಧೆಕೋರರ ಜಾಲಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಳವಂಡಿ ಪೊಲೀಸರು ಜಂಟಿಯಾಗಿ ದಾಳಿ ನೆಡೆಸಿದ್ದಾರೆ.
ಜಂಟಿ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಸುಮಾರು 2,40,000 ರೂ. ಮೌಲ್ಯದ 3,000 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ.
ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಗೆ ಹಲುವಾಗಲಿ ಸೀಮಾದ ತುಂಗಭದ್ರ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಕಳ್ಳಸಾಗಣೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅವರು, ಮೇಲಾಧಿಕಾರಿಗಳ ಆದೇಶದ ಮೇರೆಗೆ ಅಳವಂಡಿ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.
ಸ್ಥಳದಲ್ಲೇ ಸಿಕ್ಕಿಬಿದ್ದ ಅಕ್ರಮ ಸಂಗ್ರಹ:
ಅಧಿಕಾರಿಗಳ ತಂಡ ಜಂಟಿಯಾಗಿ ಹಲುವಾಗಲಿ ಸೀಮಾದ ಹೊಲವೊಂದರ ಸಮೀಪವಿರುವ ತುಂಗಭದ್ರ ನದಿ ಪಾತ್ರಕ್ಕೆ ದಾಳಿ ಇಟ್ಟಿತು. ಈ ವೇಳೆ ಅಪರಿಚಿತ ಕಳ್ಳರು ಕಳ್ಳತನದ ಉದ್ದೇಶದಿಂದ ಬೃಹತ್ ಪ್ರಮಾಣದಲ್ಲಿ ಮರಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅಧಿಕಾರಿಗಳ ವಾಹನ ಬರುತ್ತಿದ್ದಂತೆ ದಂಧೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಜಪ್ತಿಯಾದ ಮರಳಿನ ವಿವರ:
ಒಟ್ಟು ಮರಳು: ಸುಮಾರು 3000 ಮೆಟ್ರಿಕ್ ಟನ್
ಅಂದಾಜು ಮೌಲ್ಯ: ₹ 2,40,000/- (ಎರಡು ಲಕ್ಷದ ನಲವತ್ತು ಸಾವಿರ ರೂ.)
ಕಂದಾಯ ಮತ್ತು ಪೊಲೀಸ್ ಇಲಾಖೆ ಜಂಟಿ ಪಂಚನಾಮೆ ಸ್ಥಳದಲ್ಲೇ ಹಾಜರಿದ್ದ ಅಳವಂಡಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಸಹಾಯಕರ ಸಮ್ಮುಖದಲ್ಲಿ ಮಧ್ಯಾಹ್ನ 2:45 ರಿಂದ 3:00 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಪ್ರಕ್ರಿಯೆ ಜರುಗಿತು. ಜಪ್ತಿ ಮಾಡಲಾದ ಬೃಹತ್ ಮರಳಿನ ದಾಸ್ತಾನನ್ನು ಪ್ರಸ್ತುತ ಅಳವಂಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಕಳ್ಳರ ಪತ್ತೆಗೆ ಜಾಲ ಬೀಸಿದ ಪೊಲೀಸರು:
ತುಂಗಭದ್ರ ನದಿ ಪಾತ್ರದಲ್ಲಿ ಪ್ರಕೃತಿ ಸಂಪತ್ತನ್ನು ಲೂಟಿ ಮಾಡಲು ಯತ್ನಿಸಿದ ಕಳ್ಳರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಭೂವಿಜ್ಞಾನಿಗಳು ಅಳವಂಡಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಈ ಸಂಬಂಧ ಅಳವಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮರಳು ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್