ಜಮಖಂಡಿಯಲ್ಲಿ ಮಳೆ ಅವಾಂತರ: ಚೌಡಯ್ಯ ನಗರ ಜಲಾವೃತ – ₹1.97 ಕೋಟಿ ರಸ್ತೆ-ಚರಂಡಿ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ
ಬಾಗಲಕೋಟೆ, 21 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಚೌಡಯ್ಯ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರು ರಸ್ತೆಗಳ ಮೇಲೆ ನಿಂತ ಪರಿಣಾಮ ವೃದ್ಧರು, ಮಹಿಳೆಯರು, ಶಾಲಾ ಮಕ್ಕಳು ಹಾಗೂ ವಾಹನ
ಮಳೆ


ಬಾಗಲಕೋಟೆ, 21 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಚೌಡಯ್ಯ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರು ರಸ್ತೆಗಳ ಮೇಲೆ ನಿಂತ ಪರಿಣಾಮ ವೃದ್ಧರು, ಮಹಿಳೆಯರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಸಂಚಾರ ನಡೆಸಲು ಪರದಾಡುವಂತಾಗಿದ್ದು, ಸ್ಥಳೀಯರು ನಗರಸಭೆಯ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೌಡಯ್ಯ ನಗರದ ಲಕ್ಕನಕೇರಿ ಬೈಪಾಸ್ ರಸ್ತೆಯಿಂದ ವಿಠ್ಠಲ್ ಮಂದಿರದವರೆಗಿನ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸುಮಾರು ₹1.97 ಕೋಟಿ ಅನುದಾನ ಮಂಜೂರಾಗಿದ್ದು, ಕಳೆದ ಜನವರಿ 31ರಂದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ನಂತರ ಜಾರಿಯಾದ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಕಾಮಗಾರಿಯನ್ನು ಆರಂಭಿಸದೇ ವಿಳಂಬ ಮಾಡಲಾಗಿದೆ ಎಂದು ವಾರ್ಡ್ ಸಂಖ್ಯೆ 16 ಮತ್ತು 17ರ ನಿವಾಸಿಗಳು ಆರೋಪಿಸಿದ್ದಾರೆ.

ಪ್ರಸ್ತುತ ಸುರಿದ ಮಳೆಯಿಂದ ರಸ್ತೆಗಳೆಲ್ಲ ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿದ್ದು, ಮಳೆ ನೀರು ಮನೆಗಳ ಮುಂಭಾಗದಲ್ಲೇ ನಿಂತು ನಿವಾಸಿಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಪ್ರತಿಯೊಂದು ಮಳೆಯ ಸಂದರ್ಭದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಸಾಮಾಜಿಕ ಹೋರಾಟಗಾರ ಹಾಗೂ ಸ್ಥಳೀಯ ನಿವಾಸಿ ರಾಜೇಸಾಬ ಮಸಳಿ ಮಾತನಾಡಿ, ರಸ್ತೆ ಮತ್ತು ಚರಂಡಿ ಕಾಮಗಾರಿ ವಿಳಂಬದಿಂದ ಚೌಡಯ್ಯ ನಗರದ ನಿವಾಸಿಗಳು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ರಸ್ತೆಗಳು ಕೆರೆಗಳಾಗಿ ಮಾರ್ಪಡುತ್ತವೆ. ಮಕ್ಕಳು ಶಾಲೆಗೆ ತೆರಳಲು, ವೃದ್ಧರು ಆಸ್ಪತ್ರೆ ಸೇರಿದಂತೆ ಅಗತ್ಯ ಕಾರ್ಯಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬ ಮಾಡದೇ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ನಿವಾಸಿಗಳು ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ ತ್ವರಿತವಾಗಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿ ಜನರು ಸುರಕ್ಷಿತವಾಗಿ ಸಂಚರಿಸಲು ಹಾಗೂ ನೀರು ನಿಲ್ಲದಂತೆ ಶಾಶ್ವತ ಒಳಚರಂಡಿ ವ್ಯವಸ್ಥೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

ಜಮಖಂಡಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ನಗರಸಭೆ ಪೌರಾಯುಕ್ತರಾದ ಜ್ಯೋತಿ ಗಿರೀಶ್ ಅವರು ತಕ್ಷಣ ಮಧ್ಯಪ್ರವೇಶಿಸಿ ನಿಂತುಹೋಗಿರುವ ಕಾಮಗಾರಿಯನ್ನು ಆರಂಭಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ವಾರ್ಡ್ ನಿವಾಸಿಗಳು ಒತ್ತಾಯಿಸಿದ್ದಾರೆ.

ಸ್ಥಳೀಯರ ಪ್ರಕಾರ, ಕಾಮಗಾರಿ ಶೀಘ್ರ ಆರಂಭವಾದರೆ ಮಳೆಗಾಲದಲ್ಲಿ ಉಂಟಾಗುತ್ತಿರುವ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದ್ದು, ಸಾವಿರಾರು ನಿವಾಸಿಗಳ ಸಂಚಾರ ಮತ್ತು ದೈನಂದಿನ ಬದುಕು ಸುಗಮವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande