
ಬಾಗಲಕೋಟೆ, 21 ಜುಲೈ (ಹಿ.ಸ.)
ಆ್ಯಂಕರ್ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ರೂಪ ನೀಡುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ.
ಅವರೊಂದಿಗೆ ಸಚಿವಾಕಾಂಕ್ಷಿಗಳ ದಂಡೂ ಸಹ ರಾಷ್ಟ್ರ ರಾಜಧಾನಿಯತ್ತ ಮುಖಮಾಡಿದ್ದು, ಇಂದು ನಡೆಯುವ ಹೈಕಮಾಂಡ್ ಸಭೆಯತ್ತ ರಾಜ್ಯ ರಾಜಕೀಯದ ಚಿತ್ತ ನೆಟ್ಟಿದೆ.
ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆಗೆ ಸಲ್ಲಿಸಲಾಗಿದ್ದ ಪಟ್ಟಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರಸ್ಕರಿಸಿದ್ದರೆಂದು ಪಕ್ಷದ ವಲಯಗಳಲ್ಲಿ ಚರ್ಚೆಯಾಗಿತ್ತು. ಸಂಪುಟದಲ್ಲಿ ಹೊಸಬರು ಹಾಗೂ ಯುವ ಮುಖಗಳಿಗೆ ಆದ್ಯತೆ ನೀಡಬೇಕು, ಹಳೆಯ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಬಾರದು ಎಂಬ ಸೂಚನೆಯನ್ನು ಅವರು ನೀಡಿದ್ದರು ಎನ್ನಲಾಗಿತ್ತು. ಅದರಂತೆ ಈ ಬಾರಿ ಹೊಸ ಪಟ್ಟಿಯೊಂದಿಗೆ ರಾಜ್ಯ ನಾಯಕರು ದೆಹಲಿಗೆ ತೆರಳಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಯುವ ಶಾಸಕರಿಗೆ ಆದ್ಯತೆ?
ಈ ಬಾರಿ ಮೊದಲ ಹಾಗೂ ಎರಡನೇ ಅವಧಿಗೆ ಆಯ್ಕೆಯಾದ ಯುವ ಶಾಸಕರಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆಗಳಿವೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಮೊದಲ ಬಾರಿಗೆ ಆಯ್ಕೆಯಾದ ಅನೇಕ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಯುವ ಮುಖಗಳಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿಂದ ಸಚಿವಾಕಾಂಕ್ಷಿಗಳ ಸಂಖ್ಯೆ ಸಹ ಗಣನೀಯವಾಗಿ ಹೆಚ್ಚಾಗಿದೆ.
ಬಾಗಲಕೋಟೆ ಜಿಲ್ಲೆಯತ್ತವೂ ನಿರೀಕ್ಷೆ
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆದರೆ, ವಯೋಮಿತಿಯನ್ನು ಪರಿಗಣಿಸಿ 50 ವರ್ಷದೊಳಗಿನ ಶಾಸಕರಿಗೆ ಆದ್ಯತೆ ನೀಡುವ ತೀರ್ಮಾನವಾದರೆ ಕಾಶಪ್ಪನವರಿಗೆ ಅವಕಾಶ ಸವಾಲಾಗಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಇದೇ ವೇಳೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಹೆಸರೂ ಚರ್ಚೆಯಲ್ಲಿದ್ದು, ಯುವ ನಾಯಕತ್ವಕ್ಕೆ ಆದ್ಯತೆ ನೀಡಿದರೆ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ತಳ್ಳಿಹಾಕುತ್ತಿಲ್ಲ.
ಹಿರಿಯರ ಪೈಪೋಟಿಯೂ ತೀವ್ರ
ಯುವ ಮುಖಗಳ ಜೊತೆಗೆ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರೂ ಸಚಿವ ಸ್ಥಾನಕ್ಕಾಗಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಆರ್. ಬಿ. ತಿಮ್ಮಾಪುರ ಕೂಡ ಸಚಿವ ಸ್ಥಾನಕ್ಕಾಗಿ ಬಲವಾದ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹಿರಿಯರ ಕೋಟಾದಲ್ಲಿ ಅವರಿಗೆ ಅವಕಾಶ ದೊರೆಯುವ ನಿರೀಕ್ಷೆಯಿದೆ.
ರಾಹುಲ್ ಗಾಂಧಿ ನಿರ್ಧಾರದತ್ತ ಎಲ್ಲರ ಚಿತ್ತ
ರಾಜ್ಯದ ಮೂವರು ಪ್ರಮುಖ ನಾಯಕರು ಇಂದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿಗೆ ಒಪ್ಪಿಗೆ ಪಡೆಯಲಿದ್ದಾರೆ. ಅಂತಿಮವಾಗಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ, ಯಾವ ಜಿಲ್ಲೆಗೆ ಎಷ್ಟು ಪ್ರಾತಿನಿಧ್ಯ ದೊರೆಯಲಿದೆ ಹಾಗೂ ಯುವ-ಹಿರಿಯರ ಸಮತೋಲನವನ್ನು ಹೇಗೆ ಸಾಧಿಸಲಾಗುವುದು ಎಂಬುದು ಇಂದು ಸ್ಪಷ್ಟವಾಗುವ ಸಾಧ್ಯತೆಯಿದೆ.
ಜಿಲ್ಲೆಯ ಜನರ ಆಶಯ
ಬಾಗಲಕೋಟೆ ಜಿಲ್ಲೆಯಿಂದ ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ ಹಾಗೂ ಆರ್. ಬಿ. ತಿಮ್ಮಾಪುರ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿರುವ ಹಿನ್ನೆಲೆ, ಶಿವಕುಮಾರ್ ಸಚಿವ ಸಂಪುಟದಲ್ಲಿ ಜಿಲ್ಲೆಯ ಕನಿಷ್ಠ ಒಬ್ಬ ಶಾಸಕರಿಗಾದರೂ ಸಚಿವ ಸ್ಥಾನ ದೊರೆಯಲಿ ಎಂಬುದು ಜಿಲ್ಲೆಯ ಜನರ ಪ್ರಮುಖ ಆಶಯವಾಗಿದೆ. ಈಗ ಎಲ್ಲರ ಚಿತ್ತ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಯವರ ಅಂತಿಮ ತೀರ್ಮಾನದತ್ತ ನೆಟ್ಟಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande