
ವಿಜಯಪುರ, 21 ಜುಲೈ (ಹಿ.ಸ.)
ಆ್ಯಂಕರ್ : ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕುರಿತು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ನೀಡಿರುವ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸುವಂತಿದ್ದು, ಅವರು ದೇಶದ ಜನತೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರವೀಂದ್ರ ಲೋಣಿ ಒತ್ತಾಯಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರ ಕೇವಲ ಒಂದು ರೂಪಾಯಿಯನ್ನು ಟ್ರಸ್ಟ್ಗೆ ನೀಡಿದ್ದು, ಉಳಿದ ನಿರ್ಮಾಣ ಕಾರ್ಯ ಭಕ್ತರು ಹಾಗೂ ಸಾರ್ವಜನಿಕರ ಸ್ವಯಂಪ್ರೇರಿತ ದೇಣಿಗೆಯಿಂದ ನಡೆದಿದೆ ಎಂದು ಹೇಳಿದರು.
ಜನರ ತೆರಿಗೆ ಹಣದಿಂದ ಮಂದಿರ ನಿರ್ಮಾಣವಾಗಿದೆ ಎಂಬ ಎಸ್.ಎಂ. ಪಾಟೀಲ ಗಣಿಹಾರ ಅವರ ಹೇಳಿಕೆ ವಾಸ್ತವಕ್ಕೆ ದೂರವಾಗಿದ್ದು, ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ವಕ್ಫ್ ಆಸ್ತಿ ಅತಿಕ್ರಮಣ, ಅನ್ವರ್ ಮಾನಿಪ್ಪಡಿ ವರದಿಯ ಅನುಷ್ಠಾನ ಸೇರಿದಂತೆ ಅಲ್ಪಸಂಖ್ಯಾತರ ಹಿತದ ಪ್ರಶ್ನೆಗಳ ಬಗ್ಗೆ ಹೋರಾಟ ನಡೆಸಲಿ. ಅದನ್ನು ಬಿಟ್ಟು ರಾಮ ಮಂದಿರ ವಿಚಾರವನ್ನು ರಾಜಕೀಯವಾಗಿ ಬಳಸುವುದು ಸರಿಯಲ್ಲ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯತ್ವದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಈ ರೀತಿಯ ಸುಳ್ಳು ಹೇಳಿಕೆಗಳನ್ನು ನೀಡಬಾರದು ಎಂದು ಲೋಣಿ ಟೀಕಿಸಿದರು. ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವರ ಕಾರ್ಯವೈಖರಿಯನ್ನು ಕೇಂದ್ರ ಸರ್ಕಾರದ ಸಾಧನೆಗಳೊಂದಿಗೆ ಹೋಲಿಕೆ ಮಾಡಿ ಮಾತನಾಡಿದ ಅವರು, ಕೇಂದ್ರದ ಕಾರ್ಯವೈಖರಿಯಿಂದ ರಾಜ್ಯ ಸರ್ಕಾರ ಪಾಠ ಕಲಿಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಬದಲು ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಸಾಧು-ಸಂತರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ ಲೋಣಿ, ಈ ಹಿಂದೆ ಜನಪರ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ ಎಸ್.ಎಂ. ಪಾಟೀಲ ಗಣಿಹಾರ ಈಗ ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನೇ ತಮ್ಮ ರಾಜಕೀಯದ ಮುಖ್ಯ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಹಿರಂಗ ಚರ್ಚೆಗೆ ಸವಾಲು
ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಆರೋಪ ಮಾಡುವ ಎಸ್.ಎಂ. ಪಾಟೀಲ ಗಣಿಹಾರ ಅವರು ದಾಖಲೆ ಹಾಗೂ ಅಂಕಿ-ಅಂಶಗಳ ಸಮೇತ ಬಹಿರಂಗ ಚರ್ಚೆಗೆ ಬರಬೇಕು ಎಂದು ರವೀಂದ್ರ ಲೋಣಿ ಸವಾಲು ಹಾಕಿದರು. ತಾವು ಕೇಂದ್ರ ಸರ್ಕಾರದ ಸಾಧನೆಗಳನ್ನು ದಾಖಲೆಗಳೊಂದಿಗೆ ಮಂಡಿಸಲು ಸಿದ್ಧರಾಗಿದ್ದು, ಸವಾಲು ಸ್ವೀಕರಿಸಬೇಕೆಂದು ಆಹ್ವಾನಿಸಿದರು.
ಕಾಂಗ್ರೆಸ್ ಪಕ್ಷದೊಳಗೆ ಶಿಸ್ತು ಕೊರತೆಯಿದ್ದು, ತಪ್ಪು ಮಾಹಿತಿ ಹರಡುವ ನಾಯಕರಿಗೆ ಪಕ್ಷದ ಹಿರಿಯರು ಕಡಿವಾಣ ಹಾಕಬೇಕು. ಇಲ್ಲವಾದರೆ ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ಉಂಟಾಗುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಧುರೀಣ ಹಾಗೂ ಬಿಜೆಪಿ ಮುಖಂಡ ರಮೇಶ ಬಿದನೂರ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande