
ವಿಜಯಪುರ, 21 ಜುಲೈ (ಹಿ.ಸ.)
ಆ್ಯಂಕರ್ : : ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಸಿಂದಗಿಯ ಎಚ್.ಜಿ. ಕಾಲೇಜು ಆವರಣದಲ್ಲಿ ಆಯೋಜಿಸಲಾದ ವಿಜಯಪುರ ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನ–2026ಕ್ಕೆ ಮಂಗಳವಾರ ಭವ್ಯ ಚಾಲನೆ ದೊರೆಯಿತು ಎಂದು ಸಿಂದಗಿ ಶಾಸಕ ಅಶೋಕ್ ಮನಗೂಳಿ ಹೇಳಿದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಅನಾವರಣಗೊಳಿಸಿದ ಈ ಸಮ್ಮೇಳನದ ಮೊದಲ ದಿನ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ಸಾರ್ವಜನಿಕರ ಭಾರೀ ಭಾಗವಹಿಸುವಿಕೆಯಿಂದ ಅಕ್ಷರ ಹಬ್ಬದ ಸಂಭ್ರಮ ಮನೆಮಾಡಿತು.
ಸಮ್ಮೇಳನದ ಗೌರವಾನ್ವಿತ ಸರ್ವಾಧ್ಯಕ್ಷರಾದ ಹ.ಮ. ಪೂಜಾರ ಅವರ ದಿವ್ಯ ನೇತೃತ್ವದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ನಾಡು-ನುಡಿಯ ಶ್ರೇಷ್ಠತೆ, ಸಾಹಿತ್ಯದ ಮಹತ್ವ ಹಾಗೂ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಸ್ಮರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಕನ್ನಡದ ಸೇವೆಗೆ ತಮ್ಮದೇ ಆದ ಕೊಡುಗೆ ನೀಡಿದ ಅನೇಕ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಾಹಿತ್ಯವು ಸಮಾಜದ ದಾರಿದೀಪವಾಗಿದ್ದು, ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳು ಮಹತ್ವದ ವೇದಿಕೆಯಾಗಿವೆ ಎಂದು ವಕ್ತಾರರು ಅಭಿಪ್ರಾಯಪಟ್ಟರು. ಕನ್ನಡ ಭಾಷೆಯ ಉಳಿವು-ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದ್ದು, ಯುವಜನತೆ ಕನ್ನಡದ ಸಾಹಿತ್ಯ ಪರಂಪರೆಯನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸಬೇಕೆಂದು ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವಿಚಾರಗೋಷ್ಠಿಗಳಿಗೆ ಚಾಲನೆ ನೀಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ಕವಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕನ್ನಡದ ಅಕ್ಷರ ಜಾತ್ರೆಗೆ ಮೆರುಗು ತಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಗಣ್ಯರು, ಸಾಹಿತ್ಯಾಸಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾವಿರಾರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು, ಸಮ್ಮೇಳನವನ್ನು ಯಶಸ್ವಿಗೊಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande