
ಬೆಂಗಳೂರು, 20 ಜುಲೈ (ಹಿ.ಸ.):
ಆ್ಯಂಕರ್:
ಮುಂಬರುವ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಲಮೂಲಗಳ ಸಂರಕ್ಷಣೆಗಾಗಿ ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್, ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಮೂರ್ತಿಗಳ ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕರೆಯನ್ನು ಸ್ಮರಿಸಿರುವ ಸುರೇಶ್ ಕುಮಾರ್, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಗೆ ಒತ್ತು ನೀಡಿದ್ದಾರೆ. ಪಿ.ಓ.ಪಿ ಮೂರ್ತಿಗಳು ಹಾಗೂ ರಾಸಾಯನಿಕ ಬಣ್ಣಗಳು ಬೆಂಗಳೂರಿನ ಕೆರೆಗಳನ್ನು ಕಲುಷಿತಗೊಳಿಸುತ್ತಿದ್ದು, ಧಾರ್ಮಿಕ ಪಾವಿತ್ರ್ಯತೆಗೂ ಧಕ್ಕೆ ತರುತ್ತಿವೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಜಿ.ಬಿ.ಎ ಮುಖ್ಯ ಆಯುಕ್ತರಿಗೂ ಪತ್ರ ಬರೆದಿದ್ದ ಅವರು, ಇದೀಗ ಸರ್ಕಾರದ ಮಟ್ಟದಲ್ಲಿ ಕಠಿಣ ಆದೇಶ ಹೊರಡಿಸುವಂತೆ ಆಡಳಿತ ಪಕ್ಷದ ಹಿರಿಯ ಸಚಿವರನ್ನು ಕೋರಿದ್ದಾರೆ. ಪರಿಸರ ಕಾಳಜಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII