
ನವದೆಹಲಿ, 20 ಜುಲೈ (ಹಿ.ಸ.):
ಆ್ಯಂಕರ್:ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಂಸದರಿಗೆ ಸದನದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅರ್ಥಪೂರ್ಣ ಚರ್ಚೆ ನಡೆಸುವಂತೆ ಮನವಿ ಮಾಡಿದರು.
ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತರ್ಕ ಮತ್ತು ವಾಸ್ತವಾಂಶಗಳು ಬಲವಾಗಿದ್ದರೆ ಶಾಂತಚಿತ್ತದಿಂದಲೂ ತಮ್ಮ ಅಭಿಪ್ರಾಯವನ್ನು ಪರಿಣಾಮಕಾರಿಯಾಗಿ ಮಂಡಿಸಬಹುದು ಎಂದರು. ಪ್ರತಿಯೊಂದು ಧ್ವನಿಗೂ ಅವಕಾಶ, ಪ್ರತಿಯೊಂದು ವಿಚಾರಕ್ಕೂ ಗೌರವ ಸಿಗುವಂತೆ ಸಮೃದ್ಧ ಚರ್ಚೆ ನಡೆಯುವುದು ಸಂಸತ್ತಿನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮುಂಗಾರು ಅಧಿವೇಶನವನ್ನು ಮಳೆಗಾಲಕ್ಕೆ ಹೋಲಿಸಿದ ಪ್ರಧಾನಿ, ಎರಡೂ ಚುರುಕಾಗಿದ್ದರೆ ಉತ್ಪಾದಕತೆ ಹೆಚ್ಚಾಗಿ ದೇಶ ಮತ್ತು ಜನರ ಕಲ್ಯಾಣಕ್ಕೆ ನೆರವಾಗುತ್ತದೆ ಎಂದು ಹೇಳಿದರು. ಸದನ ಸುಗಮವಾಗಿ ನಡೆಯುವುದು ಹಾಗೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಚರ್ಚೆಗಳು ನಡೆಯುವುದು ಕಾಲದ ಅಗತ್ಯವಾಗಿದೆ ಎಂದರು.
ಕಳೆದ ಒಂದು ತಿಂಗಳಲ್ಲಿ ದೇಶವು ಹಲವು ಮಹತ್ವದ ಸಾಧನೆಗಳನ್ನು ದಾಖಲಿಸಿದ್ದು, ರಾಜಸ್ಥಾನ ತೈಲ ಶುದ್ಧೀಕರಣ ಘಟಕ ಉದ್ಘಾಟನೆ, ಮೂರನೇ ಸೆಮಿಕಂಡಕ್ಟರ್ ಘಟಕ ಆರಂಭ, ಹಸಿರು ಹೈಡ್ರೋಜನ್ ರೈಲು ಹಾಗೂ ಖಾಸಗಿ ಸಂಸ್ಥೆ ಸ್ಕೈರೂಟ್‌ನ ರಾಕೆಟ್ ಉಡಾವಣೆ ಸೇರಿದಂತೆ ಹಲವು ಸಾಧನೆಗಳು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿವೆ ಎಂದು ಪ್ರಧಾನಿ ಹೇಳಿದರು. ಭಾರತದ ಯುವಕರ ಸಾಮರ್ಥ್ಯ ಮತ್ತು ಕನಸುಗಳು ಅಂತರಿಕ್ಷದಷ್ಟೇ ಅಪಾರವಾಗಿವೆ ಎಂದು ಅವರು ಶ್ಲಾಘಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.