ಸಿಂಧು ಜಲ ಒಪ್ಪಂದ ಹಳೆಯ ರೂಪದಲ್ಲಿ ಮರುಜಾರಿಗೆ ಬರದು: ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ
ನವದೆಹಲಿ, 21 ಜುಲೈ (ಹಿ.ಸ.): ಆ್ಯಂಕರ್:ಪಾಕಿಸ್ತಾನದೊಂದಿಗೆ 1960ರ ಸಿಂಧು ಜಲ ಒಪ್ಪಂದ ಹಿಂದಿನ ಸ್ವರೂಪದಲ್ಲೇ ಮತ್ತೆ ಜಾರಿಗೆ ಬರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪಾಕಿಸ್ತಾನವು ಕೆನಡಾ ಮೂಲಕ ಮಧ್ಯಸ್ಥಿಕೆಗೆ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಉನ್ನತ ಮೂಲಗಳು ಈ ನಿಲುವು ವ್ಯಕ್
ಸಾಂಕೇತಿಕ


ನವದೆಹಲಿ, 21 ಜುಲೈ (ಹಿ.ಸ.):

ಆ್ಯಂಕರ್:ಪಾಕಿಸ್ತಾನದೊಂದಿಗೆ 1960ರ ಸಿಂಧು ಜಲ ಒಪ್ಪಂದ ಹಿಂದಿನ ಸ್ವರೂಪದಲ್ಲೇ ಮತ್ತೆ ಜಾರಿಗೆ ಬರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಪಾಕಿಸ್ತಾನವು ಕೆನಡಾ ಮೂಲಕ ಮಧ್ಯಸ್ಥಿಕೆಗೆ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಉನ್ನತ ಮೂಲಗಳು ಈ ನಿಲುವು ವ್ಯಕ್ತಪಡಿಸಿವೆ.

ಹಿಂದುಸ್ತಾನ್ ಸಮಾಚಾರ ಸುದ್ದಿಸಂಸ್ಥೆಗೆ ಮೂಲಗಳ ಪ್ರಕಾರ ದೊರೆತಿರುವ ಮಾಹಿತಿಯಂತೆ, ಪ್ರಸ್ತುತ ರೂಪದಲ್ಲಿರುವ ಸಿಂಧು ಜಲ ಒಪ್ಪಂದವು ಭಾರತದ ಹಿತಾಸಕ್ತಿಗೆ ಅನುಕೂಲಕರವಾಗಿಲ್ಲ. ಭಾರತವು ಸ್ನೇಹ ಮತ್ತು ಸದ್ಭಾವನೆಯ ದೃಷ್ಟಿಯಿಂದ ಒಪ್ಪಂದವನ್ನು ಪಾಲಿಸಿಕೊಂಡು ಬಂದಿದ್ದರೂ, ಕಳೆದ ನಾಲ್ಕು ದಶಕಗಳಿಂದ ಪಾಕಿಸ್ತಾನ ಗಡಿ ದಾಟಿ ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬೆಂಬಲಿಸುವ ಮೂಲಕ ಒಪ್ಪಂದದ ಮೂಲ ತತ್ವವನ್ನೇ ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿದೆ.

ಸಂಸತ್, ಮುಂಬೈ, ಉರಿ, ಪುಲ್ವಾಮಾ ಹಾಗೂ ಪಹಲ್ಗಾಮ್‌ ಮೇಲಿನ ಭಯೋತ್ಪಾದಕ ದಾಳಿಗಳಂತಹ ಘಟನೆಗಳಿಂದ ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ವಿಶ್ವಾಸ ಸಂಪೂರ್ಣವಾಗಿ ಕುಸಿದಿದೆ. 2025ರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸಿಂಧು ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. 2025ಕ್ಕೂ ಮುಂಚಿನ ಸ್ಥಿತಿಗೆ ಮರಳುವುದು ಈಗ ಸಾಧ್ಯವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮುಂದೆ ಯಾವುದೇ ಹೊಸ ಒಪ್ಪಂದವಾದರೂ ಅದು ಹವಾಮಾನ ಬದಲಾವಣೆ, ಹಿಮನದಿಗಳ ಕರಗುವಿಕೆ, ಹೆಚ್ಚುತ್ತಿರುವ ನೀರಿನ ಬೇಡಿಕೆ, ಆಧುನಿಕ ತಂತ್ರಜ್ಞಾನ ಮತ್ತು ರಾಷ್ಟ್ರೀಯ ಭದ್ರತೆ ಸೇರಿದಂತೆ ಇಂದಿನ ವಾಸ್ತವ ಪರಿಸ್ಥಿತಿಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಭಾರತ ಹೇಳಿದೆ.

ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧು ಜಲ ಒಪ್ಪಂದದ ಪ್ರಕಾರ ಪಶ್ಚಿಮದ ಸಿಂಧು, ಜೀಲಂ ಮತ್ತು ಚಿನಾಬ್ ನದಿಗಳ ನೀರಿನ ಶೇ.80ಕ್ಕಿಂತ ಹೆಚ್ಚು ಪಾಲು ಪಾಕಿಸ್ತಾನಕ್ಕೆ ದೊರೆತಿದ್ದು, ಭಾರತಕ್ಕೆ ರಾವಿ, ಬಿಯಾಸ್ ಮತ್ತು ಸತ್ಲಜ್ ನದಿಗಳ ನೀರನ್ನು ಮಾತ್ರ ಸೀಮಿತವಾಗಿ ಬಳಸಲು ಅವಕಾಶ ನೀಡಲಾಗಿತ್ತು. ಈ ವ್ಯವಸ್ಥೆ ಈಗ ಏಕಪಕ್ಷೀಯ ಹಾಗೂ ಕಾಲಾನುಗುಣವಲ್ಲ ಎಂದು ಭಾರತ ಅಭಿಪ್ರಾಯಪಟ್ಟಿದೆ.

ಒಪ್ಪಂದ ಅಮಾನತಿನ ಬಳಿಕ ಶಾಶ್ವತ ಸಿಂಧು ಆಯೋಗದ ಸಭೆಗಳು, ಜಂಟಿ ಪರಿಶೀಲನೆ, ಮಾಹಿತಿ ವಿನಿಮಯ ಹಾಗೂ ತಟಸ್ಥ ತಜ್ಞರ ಮೂಲಕ ನಡೆಯುವ ವಿವಾದ ಪರಿಹಾರ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆದರೆ ಪ್ರವಾಹ ಸಂಬಂಧಿತ ಮಾಹಿತಿಯನ್ನು ಮಾನವೀಯ ದೃಷ್ಟಿಯಿಂದ ಹಿಂದಿನಂತೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ ಹಂಚಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಭಾರತ ತನ್ನ ಪಾಲಿನ ಸಿಂಧು ನದಿಯ ನೀರನ್ನು ಸಂಪೂರ್ಣವಾಗಿ ಬಳಸುವತ್ತ ಕ್ರಮಗಳನ್ನು ವೇಗಗೊಳಿಸಿದೆ. 624 ಮೆಗಾವ್ಯಾಟ್ ಕಿರು ಹಾಗೂ 1000 ಮೆಗಾವ್ಯಾಟ್ ಪಾಕಲ್ ದುಲ್ ಜಲವಿದ್ಯುತ್ ಯೋಜನೆಗಳು ಈ ವರ್ಷವೇ ಕಾರ್ಯಾರಂಭಗೊಳ್ಳಲಿವೆ. ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಇನ್ನೂ 5,500 ಮೆಗಾವ್ಯಾಟ್ ಸಾಮರ್ಥ್ಯದ ಹೊಸ ಜಲವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ.

ಭಾರತದ ಅಭಿವೃದ್ಧಿ ಯೋಜನೆಗಳಿಗೆ ಪಾಕಿಸ್ತಾನ ಹಲವು ವರ್ಷಗಳಿಂದ ಅನಗತ್ಯ ಆಕ್ಷೇಪಣೆ ಸಲ್ಲಿಸಿ ವಿಳಂಬ ಮಾಡುತ್ತಿರುವುದಾಗಿ ಭಾರತ ಆರೋಪಿಸಿದ್ದು, ಭಯೋತ್ಪಾದನೆಗೆ ಬೆಂಬಲವನ್ನು ಸಂಪೂರ್ಣವಾಗಿ ಕೈಬಿಡುವ ವಿಶ್ವಾಸಾರ್ಹ ಕ್ರಮಗಳನ್ನು ಪಾಕಿಸ್ತಾನ ಕೈಗೊಂಡಾಗ ಮಾತ್ರ ಭವಿಷ್ಯದ ಯಾವುದೇ ರಚನಾತ್ಮಕ ಮಾತುಕತೆಗೆ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande