ರಾಜ್ಯದ 579 ಮದ್ಯದ ಸನ್ನದುಗಳ ಇ-ಹರಾಜು: ಜುಲೈ 24ರಿಂದ ನೇರ ಬಿಡ್ಡಿಂಗ್
ಕೊಪ್ಪಳ , 20 ಜುಲೈ (ಹಿ.ಸ.): ಆ್ಯಂಕರ್ : ರಾಜ್ಯ ಸರ್ಕಾರವು 2026-27ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಗೆ ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ಪೈಕಿ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಹರಾಜಿಗೆ ಲಭ್ಯ
ರಾಜ್ಯದ 579 ಮದ್ಯದ ಸನ್ನದುಗಳ ಇ-ಹರಾಜು: ಜುಲೈ 24ರಿಂದ ನೇರ ಬಿಡ್ಡಿಂಗ್


ಕೊಪ್ಪಳ , 20 ಜುಲೈ (ಹಿ.ಸ.):

ಆ್ಯಂಕರ್ : ರಾಜ್ಯ ಸರ್ಕಾರವು 2026-27ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಗೆ ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ಪೈಕಿ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಹರಾಜಿಗೆ ಲಭ್ಯವಿದ್ದು, ಬಿಡ್ದಾರರ ನೋಂದಣಿ ಈಗಾಗಲೇ ಆರಂಭವಾಗಿದೆ. ಜುಲೈ 24ರಿಂದ 31ರವರೆಗೆ ವಿವಿಧ ಹಂತಗಳಲ್ಲಿ ನೇರ ಆನ್‌ಲೈನ್ ಬಿಡ್ಡಿಂಗ್ ನಡೆಯಲಿದೆ.

ಬೆಂಗಳೂರು ನಗರದಲ್ಲೇ ಅತಿ ಹೆಚ್ಚು 119 ಸಿಎಲ್(2-ಎ) ಹಾಗೂ 67 ಸಿಎಲ್(9-ಎ) ಸನ್ನದುಗಳು ಲಭ್ಯವಿವೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ವರ್ಗಗಳಿಗೆ ಸರ್ಕಾರ ಮೀಸಲಾತಿಯನ್ನೂ ಕಲ್ಪಿಸಿದೆ.

ಇ-ಹರಾಜಿನಲ್ಲಿ ವ್ಯಕ್ತಿಗಳು, ಏಕವ್ಯಕ್ತಿ ಸಂಸ್ಥೆಗಳು, ಟ್ರಸ್ಟ್‌ಗಳು, ಸೊಸೈಟಿಗಳು, ಪಾಲುದಾರಿಕೆ ಸಂಸ್ಥೆಗಳು, ಎಲ್‌ಎಲ್‌ಪಿ ಹಾಗೂ ಕಂಪನಿಗಳು ಭಾಗವಹಿಸಬಹುದು. ನೋಂದಣಿಗೆ ₹1,000 ಹಾಗೂ ಜಿಎಸ್‌ಟಿ ಪಾವತಿಸಬೇಕಿದ್ದು, ಪ್ರತಿ ಅರ್ಜಿಗೆ ₹50,000 ಮರುಪಾವತಿಯಾಗದ ಅರ್ಜಿ ಶುಲ್ಕ ನಿಗದಿಯಾಗಿದೆ.

ಜುಲೈ 24ರಿಂದ 31ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎರಡು ಹಂತಗಳಲ್ಲಿ ಜಿಲ್ಲಾವಾರು ಇ-ಹರಾಜು ನಡೆಯಲಿದೆ. ಕೊಪ್ಪಳ ಜಿಲ್ಲೆಯ 6 ಸನ್ನದುಗಳ ಹರಾಜು ಜುಲೈ 29ರಂದು ಬೆಳಿಗ್ಗೆ ಮೊದಲ ಹಂತದಲ್ಲಿ ನಡೆಯಲಿದೆ.

ಇ-ಹರಾಜಿನ ಅಧಿಸೂಚನೆ, ನೋಂದಣಿ ವಿಧಾನ, ಬಳಕೆದಾರರ ಕೈಪಿಡಿ, ಪ್ರಶ್ನೋತ್ತರಗಳು ಹಾಗೂ ವಿಡಿಯೊ ಮಾರ್ಗದರ್ಶನ ಅಬಕಾರಿ ಇಲಾಖೆಯ ಅಧಿಕೃತ ಜಾಲತಾಣ ಮತ್ತು ಎಂಎಸ್‌ಟಿಸಿ ಪೋರ್ಟಲ್‌ನಲ್ಲಿ ಲಭ್ಯವಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande