
ಕೋಲಾರ,ಜು.೨೦ (ಹಿ.ಸ):
ಆ್ಯಂಕರ್ : ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ವತಿಯಿಂದ ಹೊಸ ಬಡಾವಣೆ ನಿರ್ಮಾಣಕ್ಕಾಗಿ ರೈತರ ಜಮೀನು ಪಡೆಯುವ ಸಂಬಂಧ ರೈತರ ಅಭಿಪ್ರಾಯ ಸಂಗ್ರಹಿಸಲು ಇನ್ನೂ ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರ ಹೊರವಲಯದ ಕುಡಾ ಕಚೇರಿ ಬಳಿ ಸೋಮವಾರ ಟಮಕ, ಗಾಂಧಿನಗರ, ಗದ್ದೆಕಣ್ಣೂರು, ಹಾಗೂ ಅಮಾನಿಕೆರೆ ಭಾಗದಲ್ಲಿನ ಜಮೀನುಗಳ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಂದ ಯಾವುದೇ ರೀತಿಯ ಬಲವಂತದ ಭೂಸ್ವಾಧೀನ ಮಾಡುವುದಿಲ್ಲ ನಿಮಗೆ ಮಾಹಿತಿ ಕೊಟ್ಟು ಒಪ್ಪಿಗೆ ಪಡೆಯಲು ಸಭೆ ಮಾಡುತ್ತಿದ್ದೇವೆ ಕೆಲವರು ಜಮೀನು ನೀಡಲು ಒಪ್ಪಿದ್ದಾರೆ, ಇನ್ನೂ ಕೆಲವರು ಒಪ್ಪಿಗೆ ನೀಡಲಿಲ್ಲ ಇದು ಮೊದಲ ಸಭೆಯಾಗಿದ್ದು, ರೈತರು ಚರ್ಚಿಸಿ ಸೂಕ್ತ ನಿರ್ಧಾರ ತಿಳಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ಸುಮಾರು ೧೬೭ ಎಕರೆ ಜಮೀನನ್ನು ಗುರುತಿಸಲಾಗಿದೆ ರೈತರಿಂದ ೫೦:೫೦ ಅನುಪಾತದಲ್ಲಿ ಭೂಮಿ ಪಡೆಯುವುದು ಅಥವಾ ನೇರವಾಗಿ ಖರೀದಿ ಪ್ರಕ್ರಿಯೆ ಮೂಲಕವಾಗಿ ಹೊಸ ಬಡಾವಣೆ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಕುಡಾ ಬಳಿ ಸುಮಾರು ೩೩೩ ನಿವೇಶನಗಳಿದ್ದು, ಅವುಗಳಲ್ಲಿ ೫೬ ನಿವೇಶನಗಳ ಹರಾಜಿಗೆ ಅನುಮೋದನೆ ದೊರೆತಿದೆ. ಹರಾಜಿನಿಂದ ಬರುವ ಆದಾಯ ಸೇರಿದಂತೆ ಇತರೆ ಎಲ್ಲಾ ಸೇರಿ ೩೦೦ ಕೋಟಿ ಹಣ ಇದ್ದು ಅದರಲ್ಲಿ ಹೊಸ ಬಡಾವಣೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಗಾಂಧಿನಗರ ನಾರಾಯಣಸ್ವಾಮಿ, ಟಮಕ ವೆಂಕಟೇಶ್ ದಲಿತ ನಾರಾಯಣಸ್ವಾಮಿ ಸೇರಿದಂತೆ ರೈತರು ಮಾತನಾಡಿ ರೈತರು ಜಮೀನು ಯಾವುದೇ ಕಾರಣಕ್ಕೂ ನೀಡಲು ಸಿದ್ದವಿಲ್ಲ ಎಂದು ಸ್ಪಷ್ಟಪಡಿಸಿದರು ಮುಂದೆ ಮತ್ತೊಂದು ಬಾರಿ ಸಭೆ ನಡೆಸುವ ಅಗತ್ಯವಿಲ್ಲ ಇಂದೇ ಜಮೀನು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ತಿಳಿಸಿ ಬಿಡಿ ಎಂದು ಒತ್ತಾಯಿಸಿದರು.
ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಕೋಲಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳು ವೇಗವಾಗಿ ವಿಸ್ತರಿಸುತ್ತಿವೆ. ಕಳೆದ ೩೦ ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣವಾಗಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಮೂಲ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಬಡಾವಣೆ ಅಗತ್ಯವಾಗಿದೆ ಅದು ರೈತರ ಒಪ್ಪಿಗೆ ಪಡೆದು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ತಹಶೀಲ್ದಾರ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ವೇಮಗಲ್-ನರಸಾಪುರ ಪ್ರಾಧಿಕಾರದ ಅಧ್ಯಕ್ಷ ಉರಟಿ ಅಗ್ರಹಾರ ಚೌಡರೆಡ್ಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರಸಭೆ ಮಾಜಿ ಸದಸ್ಯ ಆಫ್ಸರ್, ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕುಡಾ ಸದಸ್ಯರಾದ ಬಿ.ಟಿ. ಮಂಜುನಾಥ್, ಅನಿಲ್ ಐಯ್ಯ, ಕಿಲಾರಿಪೇಟೆ ಮಣಿ, ಜ್ಯೋತಿ ಬ್ಯಾಂಕ್ ಮುನಿಯಪ್ಪ, ಆಯುಕ್ತ ಶ್ರೀನಾಥ್ ಹಾಗೂ ರೈತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್