ಪೋಷಕತ್ವ ಯೋಜನೆಯಡಿ ಮಕ್ಕಳ ಪಾಲನೆಗೆ ಅವಕಾಶ
ಗದಗ, 20 ಜುಲೈ (ಹಿ.ಸ.) ಆ್ಯಂಕರ್:- ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಸುರಕ್ಷಿತ ಹಾಗೂ ಪ್ರೀತಿಪೂರ್ಣ ಕೌಟುಂಬಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ಪೋಷಕತ್ವ ಹಾಗೂ ಗುಂಪು ಪೋಷಕತ್ವ ಯೋಜನೆಯಡಿ ಆಸಕ್ತ ಕುಟುಂಬಗಳು ಮತ್ತು ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಫೋಟೋ


ಗದಗ, 20 ಜುಲೈ (ಹಿ.ಸ.)

ಆ್ಯಂಕರ್:- ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಸುರಕ್ಷಿತ ಹಾಗೂ ಪ್ರೀತಿಪೂರ್ಣ ಕೌಟುಂಬಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ಪೋಷಕತ್ವ ಹಾಗೂ ಗುಂಪು ಪೋಷಕತ್ವ ಯೋಜನೆಯಡಿ ಆಸಕ್ತ ಕುಟುಂಬಗಳು ಮತ್ತು ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.

ಜಿಲ್ಲೆಯಲ್ಲಿ ಸರ್ಕಾರಿ ಬಾಲಮಂದಿರಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅನಾಥ, ನಿರ್ಗತಿಕ, ತ್ಯಜಿಸಲ್ಪಟ್ಟ ಮತ್ತು ಪೋಷಣೆ ಹಾಗೂ ರಕ್ಷಣೆ ಅಗತ್ಯವಿರುವ ಮಕ್ಕಳ ಆರೈಕೆಗಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಮಕ್ಕಳ ಸಮಗ್ರ ಬೆಳವಣಿಗೆಗೆ ಕುಟುಂಬದಂತಹ ಪ್ರೀತಿಯ ವಾತಾವರಣ ಅತ್ಯಗತ್ಯವಾಗಿರುವುದರಿಂದ, ತಾತ್ಕಾಲಿಕವಾಗಿ ಮಕ್ಕಳನ್ನು ತಮ್ಮ ಕುಟುಂಬದಲ್ಲಿ ಸಾಕಿ-ಬೆಳೆಸಲು ಆಸಕ್ತಿ ಹೊಂದಿರುವ ಕುಟುಂಬಗಳು ಹಾಗೂ ಸಂಸ್ಥೆಗಳು ಈ ಯೋಜನೆಯಡಿ ನೋಂದಣಿ ಮಾಡಿಸಬಹುದಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನೀಡಿರುವ ಮಾಹಿತಿಯಂತೆ, ಪೋಷಕತ್ವ ವಹಿಸಿಕೊಳ್ಳುವ ಕುಟುಂಬವು ಮಗುವಿಗೆ ಸುರಕ್ಷಿತ ವಾತಾವರಣ ಒದಗಿಸುವುದರ ಜೊತೆಗೆ ಸಮರ್ಪಕ ಆಹಾರ, ಉತ್ತಮ ಬಟ್ಟೆ, ಸುರಕ್ಷಿತ ವಸತಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮಗುವಿನ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಅಗತ್ಯವಾದ ಆರೈಕೆ, ಪ್ರೀತಿ, ಮಾರ್ಗದರ್ಶನ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸಬೇಕಾಗುತ್ತದೆ.

ಇದಲ್ಲದೆ, ಮಗುವಿನ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವೃತ್ತಿಪರ ತರಬೇತಿ, ಕೌಶಲ್ಯಾಭಿವೃದ್ಧಿ ಹಾಗೂ ಭವಿಷ್ಯದ ಬದುಕಿಗೆ ಅಗತ್ಯವಾದ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿಯೂ ಪೋಷಕತ್ವ ಕುಟುಂಬದ ಮೇಲಿದೆ. ಮಗುವಿನ ಹಿತಾಸಕ್ತಿಗೆ ಧಕ್ಕೆಯಾಗದಂತೆ ಎಲ್ಲಾ ರೀತಿಯ ಆರೈಕೆ ಮತ್ತು ರಕ್ಷಣೆ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಈ ಯೋಜನೆಯಡಿ ಮಕ್ಕಳನ್ನು ದತ್ತು ನೀಡುವುದಿಲ್ಲ. ಬದಲಾಗಿ, ತಾತ್ಕಾಲಿಕ ಅವಧಿಗೆ ಕುಟುಂಬದ ವಾತಾವರಣದಲ್ಲಿ ಬೆಳೆಸುವ ಮೂಲಕ ಮಗುವಿನ ವ್ಯಕ್ತಿತ್ವ ವಿಕಸನ, ಶಿಕ್ಷಣ, ಆರೋಗ್ಯ ಹಾಗೂ ಭಾವನಾತ್ಮಕ ಭದ್ರತೆಗೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆದು ಸಮಾಜದ ಮುಖ್ಯವಾಹಿನಿಯಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೋಷಕತ್ವ ವಹಿಸಿಕೊಳ್ಳಲು ಆಸಕ್ತ ಕುಟುಂಬಗಳು ಹಾಗೂ ಸಂಸ್ಥೆಗಳು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, 2ನೇ ಮಹಡಿ, ಕೊಠಡಿ ಸಂಖ್ಯೆ 225, ಗದಗ ಇಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಹೆಸರು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ದೂರವಾಣಿ ಸಂಖ್ಯೆ 08372-246344, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗದಗ ದೂರವಾಣಿ ಸಂಖ್ಯೆ 08372-250758 ಅನ್ನು ಸಂಪರ್ಕಿಸಬಹುದು. ಮಕ್ಕಳಿಗೆ ಸಂಬಂಧಿಸಿದ ಯಾವುದೇ ತುರ್ತು ಸಹಾಯ ಅಥವಾ ಮಾಹಿತಿ ಅಗತ್ಯವಿದ್ದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಉಚಿತವಾಗಿ ಕರೆ ಮಾಡಬಹುದಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ರಫೀಕಾ ಎ. ಹಳ್ಳೂರು, ಮಕ್ಕಳಿಗೆ ಸುರಕ್ಷಿತ, ಪ್ರೀತಿಪೂರ್ಣ ಹಾಗೂ ಕೌಟುಂಬಿಕ ವಾತಾವರಣ ಕಲ್ಪಿಸುವ ಸಾಮಾಜಿಕ ಕಳಕಳಿ ಹೊಂದಿರುವ ಕುಟುಂಬಗಳು ಮತ್ತು ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande