
ಬೆಂಗಳೂರು, 20 ಜುಲೈ (ಹಿ.ಸ.):
ಆ್ಯಂಕರ್:
ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ರಾಮಚಂದ್ರಗೌಡ ಅವರ ನುಡಿನಮನ ಕಾರ್ಯಕ್ರಮವು ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಕಟ್ಟುವಲ್ಲಿ ಗೌಡರ ಪ್ರಾಮಾಣಿಕ ಪ್ರಯತ್ನ ಹಾಗೂ ಐದು ದಶಕಗಳ ಒಡನಾಟವನ್ನು ಸ್ಮರಿಸಿ ಭಾವುಕರಾದರು. ತುರ್ತು ಪರಿಸ್ಥಿತಿ ಹೋರಾಟ, ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಹಾಗೂ ಲಾಟರಿ ನಿಷೇಧದಂತಹ ಜನಪರ ಹೋರಾಟಗಳಲ್ಲಿ ಅವರ ಪಾತ್ರ ಹಿರಿದಾದದ್ದು ಎಂದು ತಿಳಿಸಿದರು.
ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ರಾಮಚಂದ್ರಗೌಡರು ದೂರದರ್ಶಿತ್ವದ ನಾಯಕ ಹಾಗೂ ಪಕ್ಷದ 'ಫ್ರೆಂಡ್, ಫಿಲಾಸಫರ್ ಅಂಡ್ ಗೈಡ್' ಆಗಿ ಮಾರ್ಗದರ್ಶನ ನೀಡಿದ್ದರು ಎಂದು ಬಣ್ಣಿಸಿದರು. ಸ್ವಯಂ ಘೋಷಿತ ಆಸ್ತಿ ಪದ್ಧತಿ ಜಾರಿ ಹಾಗೂ ಗೋವಾ ವಿಮೋಚನಾ ಚಳವಳಿಯ ನೆನಪುಗಳನ್ನು ಹಂಚಿಕೊಂಡ ಅವರು, ಒಬ್ಬ ಆದರ್ಶ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಅವರು ಶ್ರೇಷ್ಠ ಉದಾಹರಣೆ ಎಂದರು. ಮಿಥಿಕ್ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದು ಅಗಲಿದ ಚೇತನಕ್ಕೆ ಪುಷ್ಪನಮನ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII