ಸರ್ವಪಕ್ಷ ಸಭೆಯಲ್ಲಿ ಎನ್ಸಿಪಿಐ ವಿವಾದ: ಪ್ರತಿಪಕ್ಷಗಳ ಸಾಂಕೇತಿಕ ಬಹಿಷ್ಕಾರ
ನವದೆಹಲಿ, 19 ಜುಲೈ (ಹಿ.ಸ.): ಆ್ಯಂಕರ್: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗ ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ನೂತನ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ)ಗೆ ಆಹ್ವಾನ ನೀಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ ಆಕ್
ಸರ್ವಪಕ್ಷ ಸಭೆ


ನವದೆಹಲಿ, 19 ಜುಲೈ (ಹಿ.ಸ.):

ಆ್ಯಂಕರ್:

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗ ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ನೂತನ ನ್ಯಾಷನಲ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ)ಗೆ ಆಹ್ವಾನ ನೀಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಯಿತು. ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಜಾರ್ಖಂಡ್ ಮುಕ್ತಿ ಮೋರ್ಚಾ, ಆಮ್ ಆದ್ಮಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎಡಪಕ್ಷಗಳು ಹಾಗೂ ಶಿವಸೇನೆ (ಯುಬಿಟಿ) ಸೇರಿದಂತೆ ಹಲವು ಪ್ರತಿಪಕ್ಷಗಳ ನಾಯಕರು ಕೆಲ ನಿಮಿಷಗಳ ಕಾಲ ಸಭೆಯಿಂದ ಸಾಂಕೇತಿಕವಾಗಿ ಹೊರನಡೆದು ಪ್ರತಿಭಟನೆ ನಡೆಸಿದರು. ಬಳಿಕ ಮತ್ತೆ ಸಭೆಗೆ ಮರಳಿ ಚರ್ಚೆಯಲ್ಲಿ ಭಾಗವಹಿಸಿದರು.

ಸಂಸತ್ ಭವನದ ಅನೆಕ್ಸಿ ಕಟ್ಟಡದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘ್ವಾಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಸಂಸದರು ಭಾಗವಹಿಸಿದ್ದರು. ಜುಲೈ 20ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ ಕಾರ್ಯಸೂಚಿ, ಪ್ರಮುಖ ಮಸೂದೆಗಳು ಹಾಗೂ ಸದನದ ಕಾರ್ಯನಿರ್ವಹಣೆ ಕುರಿತು ಎಲ್ಲಾ ಪಕ್ಷಗಳ ನಡುವೆ ಒಮ್ಮತ ಮೂಡಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು.

ಎನ್‌ಸಿಪಿಐ ಆಹ್ವಾನಕ್ಕೆ ವಿರೋಧ

ಸಭೆಯ ಆರಂಭದಲ್ಲೇ ತೃಣಮೂಲ ಕಾಂಗ್ರೆಸ್, ಎನ್‌ಸಿಪಿಐಗೆ ಆಹ್ವಾನ ನೀಡಿರುವುದನ್ನು ತೀವ್ರವಾಗಿ ವಿರೋಧಿಸಿತು. ನೂತನ ಪಕ್ಷಕ್ಕೆ ಇನ್ನೂ ಲೋಕಸಭೆಯಲ್ಲಿ ಅಧಿಕೃತ ಮಾನ್ಯತೆ ದೊರೆತಿಲ್ಲ. ಪಕ್ಷದ ಮಾನ್ಯತೆ ಕುರಿತು ಅಂತಿಮ ನಿರ್ಧಾರವನ್ನು ಲೋಕಸಭಾಧ್ಯಕ್ಷರು ಕೈಗೊಳ್ಳಬೇಕಿದ್ದು, ಆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಹೊಸ ಪಕ್ಷವನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸುವುದು ಸಂಸತ್ತಿನ ಸಂಪ್ರದಾಯಗಳಿಗೆ ವಿರುದ್ಧ ಎಂದು ಪ್ರತಿಪಕ್ಷಗಳು ಆರೋಪಿಸಿದವು.

ರಿಜಿಜು ಮನವಿ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಂಗಾರು ಅಧಿವೇಶನದಲ್ಲಿ ಸರ್ಕಾರ ಹಲವು ಮಹತ್ವದ ಮಸೂದೆಗಳು ಹಾಗೂ ಇತರ ಶಾಸನಾತ್ಮಕ ಕಾರ್ಯಗಳನ್ನು ಮಂಡಿಸಲಿದ್ದು, ಸದನ ಸುಗಮವಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಸತ್ತು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ವೇದಿಕೆಯಾಗಿದ್ದು, ಪ್ರತಿಯೊಬ್ಬ ಜನಪ್ರತಿನಿಧಿಗೂ ತಮ್ಮ ಅಭಿಪ್ರಾಯ ಮಂಡಿಸುವ ಹಕ್ಕಿದೆ. ಸರ್ಕಾರ ವಿರೋಧ ಪಕ್ಷಗಳು ಎತ್ತುವ ಎಲ್ಲ ವಿಷಯಗಳ ಮೇಲೂ ಚರ್ಚೆಗೆ ಸಿದ್ಧವಾಗಿದೆ. ಆದರೆ ಗದ್ದಲ ಮತ್ತು ಕಲಾಪ ಸ್ಥಗಿತಗೊಳಿಸುವ ಬದಲು ಚರ್ಚೆ ಹಾಗೂ ಸಂವಾದದ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು ಎಂದು ಅವರು ಹೇಳಿದರು.

ಕಲಾಪಗಳು ಪದೇ ಪದೇ ಸ್ಥಗಿತಗೊಂಡರೆ ಸಾರ್ವಜನಿಕರ ಸಮಯ ಮತ್ತು ತೆರಿಗೆದಾರರ ಹಣ ವ್ಯರ್ಥವಾಗುತ್ತದೆ. ದೇಶದ ಜನರು ಸಂಸತ್ತಿನಲ್ಲಿ ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದರು.

ಪ್ರತಿ ಪಕ್ಷಗಳ ಆರೋಪ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ತೃಣಮೂಲ ಕಾಂಗ್ರೆಸ್‌ನಿಂದ ಬೇರ್ಪಟ್ಟ 20 ಸಂಸದರ ಹೊಸ ಗುಂಪಾದ ಎನ್‌ಸಿಪಿಐಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಎಲ್ಲಾ ವಿರೋಧ ಪಕ್ಷಗಳು ಸಾಂಕೇತಿಕವಾಗಿ ಸಭೆಯನ್ನು ಬಹಿಷ್ಕರಿಸಿದ್ದಾಗಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಲೋಕಸಭೆಯ ಅಧಿಕೃತ ದಾಖಲೆಗಳಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಇನ್ನೂ 28 ಸಂಸದರೇ ದಾಖಲಾಗಿದ್ದಾರೆ. ಪಕ್ಷದಿಂದ ಬೇರ್ಪಟ್ಟ 20 ಸಂಸದರ ವಿಲೀನಕ್ಕೆ ಲೋಕಸಭಾಧ್ಯಕ್ಷರ ಅನುಮೋದನೆ ದೊರೆತಿಲ್ಲ. ಅವರ ವಿರುದ್ಧ ಸಲ್ಲಿಸಲಾದ ಅನರ್ಹತಾ ಅರ್ಜಿಗಳೂ ಬಾಕಿ ಇರುವ ಕಾರಣ ಅವರನ್ನು ಪ್ರತ್ಯೇಕ ರಾಜಕೀಯ ಪಕ್ಷವಾಗಿ ಪರಿಗಣಿಸುವುದು ಸೂಕ್ತವಲ್ಲ ಎಂದು ಹೇಳಿದರು.

ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್, ಸರ್ಕಾರದ ನಡೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಂಸದ ಪಿ. ಸಂತೋಷ್ ಕುಮಾರ್, ರಾಜಕೀಯ ಪಕ್ಷಗಳಲ್ಲಿ ಒಡೆದಾಟವನ್ನು ಸರ್ಕಾರವೇ ಪ್ರೋತ್ಸಾಹಿಸುತ್ತಿದೆ ಎಂದು ಟೀಕಿಸಿದರು. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಎನ್.ಡಿ. ಗುಪ್ತಾ ಕೂಡ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಬೆಂಬಲ ವ್ಯಕ್ತಪಡಿಸಿದರು. ಶಿವಸೇನೆ (ಯುಬಿಟಿ) ಸಂಸದ ಅರವಿಂದ್ ಸಾವಂತ್, ಲೋಕಸಭಾಧ್ಯಕ್ಷರು ಬಳಸಿರುವ ಅಫಿಲಿಯೇಷನ್ ಎಂಬ ಪದಕ್ಕೆ ಕಾನೂನಿನಲ್ಲಿ ಸ್ಪಷ್ಟ ಅವಕಾಶವಿಲ್ಲ ಎಂದು ಹೇಳಿದರು.

ಎನ್‌ಸಿಪಿಐ ಸ್ಪಷ್ಟನೆ

ಎನ್‌ಸಿಪಿಐ ಸೇರಿರುವ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್, 20 ಸಂಸದರ ವಿಲೀನ ಪೂರ್ಣಗೊಂಡಿದ್ದು, ಲೋಕಸಭಾಧ್ಯಕ್ಷರು ಅವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ರಾಷ್ಟ್ರಹಿತ ಹಾಗೂ ಅಭಿವೃದ್ಧಿ ವಿಷಯಗಳಲ್ಲಿ ತಮ್ಮ ಪಕ್ಷವು ರಚನಾತ್ಮಕ ಪಾತ್ರ ವಹಿಸಲಿದೆ ಎಂದು ತಿಳಿಸಿದರು.

ಎನ್‌ಸಿಪಿಐ ನಾಯಕ ಸುದೀಪ್ ಬಂಧ್ಯೋಪಾಧ್ಯಾಯ, ಹೊಸ ಪಕ್ಷದ ನಾಯಕನಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದೇನೆ. ಸಂಸತ್ತು ಸರ್ಕಾರ ಮತ್ತು ವಿರೋಧ ಪಕ್ಷ ಎರಡಕ್ಕೂ ಸೇರಿದ್ದಾಗಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಸರ್ಕಾರ ವಿರೋಧ ಪಕ್ಷಗಳ ಬಗ್ಗೆ ಸಹಿಷ್ಣುತೆಯಿಂದ ವರ್ತಿಸಬೇಕು. ತಮ್ಮ ಪಕ್ಷವು ಧರ್ಮನಿರಪೇಕ್ಷ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಸಂಸತ್ತಿನಲ್ಲಿ ಸಕಾರಾತ್ಮಕ ಸಹಕಾರ ನೀಡಲಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande