
ತೆಹ್ರಾನ್, 17 ಜುಲೈ (ಹಿ.ಸ.):
ಆ್ಯಂಕರ್:
ಇರಾನ್‌ನ ಸೇನಾ ಕೇಂದ್ರಗಳ ಮೇಲೆ ದಾಳಿ ನಡೆದರೆ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಎಲ್ಲ ಸೇನಾ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸುವುದಾಗಿ ಇರಾನ್ ಸಶಸ್ತ್ರ ಪಡೆಗಳ ಹಿರಿಯ ವಕ್ತಾರ ಬ್ರಿಗೇಡಿಯರ್ ಜನರಲ್ ಅಬೋಲ್ಫಜಲ್ ಶೆಕಾರ್ಚಿ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಹೋರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಉದ್ವಿಗ್ನತೆಗೆ ಅಮೆರಿಕದ ಸೇನಾ ಹಾಜರಾತಿಯೇ ಪ್ರಮುಖ ಕಾರಣ ಎಂದು ಆರೋಪಿಸಿದರು. ಅಮೆರಿಕ ಮತ್ತು ಇಸ್ರೇಲ್‌ಗೆ ಈ ಪ್ರದೇಶದಲ್ಲಿ ಇರುವ ಯಾವುದೇ ಹಕ್ಕಿಲ್ಲ ಎಂದು ಹೇಳಿದ ಅವರು, ಹೋರ್ಮುಜ್ ಜಲಸಂಧಿ ಇರಾನ್ ನಿಯಂತ್ರಣದಲ್ಲಿ ಸುರಕ್ಷಿತವಾಗಿದೆ ಎಂದರು.
ಇರಾನ್‌ಗೆ ಹಾನಿ ಉಂಟಾದರೆ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಸೇನಾ ಮೂಲಸೌಕರ್ಯಗಳು ತಮ್ಮ ಗುರಿಯಾಗಲಿವೆ ಎಂದು ಶೆಕಾರ್ಚಿ ಎಚ್ಚರಿಸಿದರು. ಅಗತ್ಯವಿದ್ದರೆ ದೀರ್ಘಕಾಲ ಯುದ್ಧ ನಡೆಸಲು ಇರಾನ್ ಸಿದ್ಧವಿದೆ ಎಂದೂ ಅವರು ಹೇಳಿದರು.
ಇದಕ್ಕೂ ಮುನ್ನ ಇರಾನ್‌ನ ಖಾತಮ್ ಅಲ್-ಅಂಬಿಯಾ ಕೇಂದ್ರ ಕಮಾಂಡ್ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದು, ಅಮೆರಿಕ ಯಾವುದೇ ಕಾರಣಕ್ಕೂ ಹೋರ್ಮುಜ್ ಜಲಸಂಧಿಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿತ್ತು. ಇರಾನ್‌ನ ತೈಲ ಮತ್ತು ಅನಿಲ ರಫ್ತು ಮಾರ್ಗಗಳನ್ನು ಗುರಿಯಾಗಿಸುವ ಕ್ರಮ ಮುಂದುವರಿದರೆ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಎಚ್ಚರಿಸಿತ್ತು.
ಇತ್ತೀಚಿನ ದಿನಗಳಲ್ಲಿ ಅಮೆರಿಕ ಇರಾನ್‌ನ ದಕ್ಷಿಣ ಭಾಗದ ಬಂದರುಗಳ ಮೇಲೆ ನೌಕಾ ನಿಗಾವನ್ನು ಬಲಪಡಿಸಿದ್ದು, ಕೆಲವು ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿಯನ್ನೂ ತೀವ್ರಗೊಳಿಸಿದೆ. ಇದೇ ವೇಳೆ, ಯಾವುದೇ ಒಪ್ಪಂದವಾಗದಿದ್ದರೆ ಇರಾನ್‌ನ ವಿದ್ಯುತ್ ಘಟಕಗಳು ಹಾಗೂ ಸೇತುವೆಗಳಂತಹ ಪ್ರಮುಖ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.