

ಬೆಂಗಳೂರು, 11 ಜುಲೈ (ಹಿ.ಸ.):
ಆ್ಯಂಕರ್:ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಿಗೇಪಾಳ್ಯದಲ್ಲಿ ಶನಿವಾರ ಬೆಳಗ್ಗೆ ನಡೆದ ಭೀಕರ ಘಟನೆಯಲ್ಲಿ 34 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ, ಅಜ್ಜಿ ಹಾಗೂ ಮಾವನನ್ನು ಮಚ್ಚಿನಿಂದ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತರನ್ನು ಆರೋಪಿ ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಮತ್ತು ಮಾವ ಸತೀಶ್ ಎಂದು ಗುರುತಿಸಲಾಗಿದ್ದು, ಆರೋಪಿ ಪ್ರಶಾಂತ್ ಎಂದು ತಿಳಿದುಬಂದಿದೆ. ಬೆಳಗ್ಗೆ ಸುಮಾರು 8.30ರ ವೇಳೆಗೆ ಘಟನೆ ನಡೆದಿದ್ದು, ಮನೆಯ ಯಜಮಾನ ಚಿಕ್ಕಣ್ಣ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯಂತೆ, ಪ್ರಶಾಂತ್ ಮೊದಲು ಮಾವನ ಮೇಲೆ ದಾಳಿ ನಡೆಸಿ, ಬಳಿಕ ಅಡ್ಡ ಬಂದ ತಾಯಿ ಹಾಗೂ ಅಜ್ಜಿಯ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಆತ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮೃತನ ತಂದೆ ಚಿಕ್ಕಣ್ಣ, ರಾತ್ರಿ ಎಲ್ಲರೂ ಸಾಮಾನ್ಯವಾಗಿ ಊಟ ಮಾಡಿ ಮಲಗಿದ್ದೆವು. ಮಗನ ವರ್ತನೆಯಲ್ಲಿ ಯಾವುದೇ ಅನುಮಾನ ಕಾಣಿಸಲಿಲ್ಲ. ನಾನು ಮನೆಯಲ್ಲಿದ್ದರೆ ನನ್ನನ್ನೂ ಕೊಲ್ಲುತ್ತಿದ್ದನೋ ಎನ್ನುವ ಭಯವಾಗುತ್ತಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಐವರು ವಾಸವಾಗಿದ್ದು, ನಾಲ್ವರು ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರ ದೇಹಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಗುರುತುಗಳು ಕಂಡುಬಂದಿವೆ ಎಂದು ಡಿಸಿಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಶಾಂತ್ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಿದ್ದ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಇದರ ದೃಢೀಕರಣಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.