
ಜಮ್ಮು, 11 ಜುಲೈ (ಹಿ.ಸ.):
ಆ್ಯಂಕರ್:
ಅಮರನಾಥ ಯಾತ್ರೆಯ ಅಂಗವಾಗಿ ಶನಿವಾರ ಜಮ್ಮುವಿನ ಭಗವತಿ ನಗರ ಯಾತ್ರಿಕರ ನಿವಾಸ ಮೂಲ ಶಿಬಿರದಿಂದ 2,435 ಮಹಿಳೆಯರು ಸೇರಿದಂತೆ ಒಟ್ಟು 9,182 ಭಕ್ತರ 10ನೇ ತಂಡವನ್ನು ಪವಿತ್ರ ಅಮರನಾಥ ಗುಹಾ ದೇವಾಲಯದ ದರ್ಶನಕ್ಕಾಗಿ ಕಟ್ಟುನಿಟ್ಟಿನ ಭದ್ರತೆಯ ನಡುವೆ ರವಾನಿಸಲಾಯಿತು.
ಅಧಿಕಾರಿಗಳ ಮಾಹಿತಿ ಪ್ರಕಾರ, ಯಾತ್ರಿಕರಲ್ಲಿ 256 ಸಾಧುಗಳು, 46 ಸಾಧ್ವಿಯರು ಹಾಗೂ 31 ಮಕ್ಕಳು ಸೇರಿದ್ದಾರೆ. ಜಮ್ಮುವಿನಿಂದ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮತ್ತು ಗಂದರ್‌ಬಲ್ ಜಿಲ್ಲೆಯ ಬಾಲ್ತಾಲ್ ಮೂಲ ಶಿಬಿರಗಳವರೆಗೆ ಬಹುಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೇಂದ್ರ ಅರೆಸೇನಾ ಪಡೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಇತರೆ ಭದ್ರತಾ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ವಾಹನಗಳ ಬೆಂಗಾವಲು ಪಡೆಗಳನ್ನು ನಿಗದಿತ ಸಮಯಕ್ಕೆ ಹೊರಡಿಸಲಾಯಿತು.
ಒಟ್ಟು 206 ವಾಹನಗಳಲ್ಲಿ 5,877 ಭಕ್ತರನ್ನು ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗಕ್ಕೆ ಕಳುಹಿಸಲಾಯಿತು. ಈ ಮಾರ್ಗವು ಅನಂತನಾಗ್ ಜಿಲ್ಲೆಯ ನುನ್ವಾನ್ ಮೂಲ ಶಿಬಿರದ ಮೂಲಕ ಪವಿತ್ರ ಗುಹೆಯನ್ನು ತಲುಪುತ್ತದೆ. ಇದು ತುಸು ಉದ್ದವಾದ ಮಾರ್ಗವಾಗಿದ್ದರೂ ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಮತ್ತೊಂದೆಡೆ, 127 ವಾಹನಗಳಲ್ಲಿ 3,305 ಭಕ್ತರು ಬಾಲ್ತಾಲ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, ಕಡಿಮೆ ದೂರದ ಕಾರಣ ಅಲ್ಪಾವಧಿಯಲ್ಲಿ ಗುಹೆಯನ್ನು ತಲುಪುವ ಅವಕಾಶ ಈ ಮಾರ್ಗದಲ್ಲಿದೆ.
ಯಾತ್ರಿಕರ ಅನುಕೂಲಕ್ಕಾಗಿ ವೈದ್ಯಕೀಯ ಸೇವೆ, ಕುಡಿಯುವ ನೀರು, ವಿದ್ಯುತ್, ಸಂಪರ್ಕ ವ್ಯವಸ್ಥೆ, ಆಹಾರ, ವಸತಿ ಹಾಗೂ ವಿಪತ್ತು ನಿರ್ವಹಣೆಯ ಸಮಗ್ರ ವ್ಯವಸ್ಥೆ ಮಾಡಲಾಗಿದೆ. ಹವಾಮಾನ ಮತ್ತು ಭದ್ರತಾ ಪರಿಸ್ಥಿತಿಯ ಮೇಲೆ ಆಡಳಿತ ನಿರಂತರ ನಿಗಾ ವಹಿಸಿದೆ.
ಸಮುದ್ರಮಟ್ಟದಿಂದ ಸುಮಾರು 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಅಮರನಾಥ ಗುಹೆಯ 57 ದಿನಗಳ ವಾರ್ಷಿಕ ಯಾತ್ರೆ ಜುಲೈ 3ರಂದು ಪಹಲ್ಗಾಮ್ ಹಾಗೂ ಬಾಲ್ತಾಲ್ ಎರಡೂ ಮಾರ್ಗಗಳಿಂದ ಆರಂಭಗೊಂಡಿದ್ದು, ರಕ್ಷಾಬಂಧನದಂದು ಆಗಸ್ಟ್ 28ರಂದು ಸಮಾಪ್ತಿಯಾಗಲಿದೆ.
ಈ ವರ್ಷ ಅಮರನಾಥ ಯಾತ್ರೆಗೆ ಭಕ್ತರಿಂದ ಅಪಾರ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೆ ದೇಶ-ವಿದೇಶಗಳಿಂದ ಆಗಮಿಸಿದ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಬಾಬಾ ಬರ್ಫಾನಿಯ ದರ್ಶನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಯಾತ್ರಿಕರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇರುವುದರಿಂದ ಅಗತ್ಯ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.