
ಬೆಂಗಳೂರು, 10 ಜುಲೈ (ಹಿ.ಸ.):
ಆ್ಯಂಕರ್:
ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಗುರುದತ್ತ ಚಿತ್ರ ನಿರ್ಮಾಣ ಸಂಸ್ಥೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಕಾರ್ಯಕ್ರಮಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಅಡ್ಡಿಪಡಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿರುವುದಾಗಿ ತಿಳಿಸಿದೆ.
ಪ್ರಕಟಣೆಯ ಪ್ರಕಾರ, ನಟ ಪ್ರಜ್ವಲ್ ದೇವರಾಜ್ ಅವರಿಗೆ ನೀಡಬೇಕಿದ್ದ ಬಾಕಿ ಸಂಭಾವನೆಯನ್ನು ಘಟನೆ ನಡೆದ ಮರುದಿನವೇ ಅಧಿಕೃತವಾಗಿ ಪಾವತಿಸಲಾಗಿದೆ. ಚಿತ್ರದ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ದೈಹಿಕ ರೂಪಾಂತರ (ಸಿಕ್ಸ್ ಪ್ಯಾಕ್) ಮಾಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದು, ಅದು ಚಿತ್ರದ ಕಥೆಗೆ ಪ್ರಮುಖ ಅಂಶವಾಗಿದ್ದ ಕಾರಣ ಹೆಚ್ಚಿನ ಸಂಭಾವನೆ ನಿಗದಿಪಡಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದ ದೈಹಿಕ ರೂಪಾಂತರ ಆಗದ ಹಿನ್ನೆಲೆಯಲ್ಲಿ ಸಂಭಾವನೆಯ ಒಂದು ಭಾಗವನ್ನು ತಡೆಹಿಡಿಯಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಬಾಕಿ ಹಣ ಪಾವತಿಸದಿದ್ದರೆ ಡಬ್ಬಿಂಗ್ ಮಾಡುವುದಿಲ್ಲ ಎಂದು ನಟ ತಿಳಿಸಿದ್ದರಿಂದ, ಸುಮಾರು ಎರಡು ತಿಂಗಳು ಕಾದ ಬಳಿಕ ಅನಿವಾರ್ಯವಾಗಿ ಬೇರೊಬ್ಬ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರವಾಗಿ ನಟರನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲದೆ, ನಿರ್ಮಾಪಕರಾದ ಕೆವಿಎನ್ ಸುಪ್ರಿತ್, ಜಾಕ್ ಮಂಜು ಹಾಗೂ ಲೋಹಿತ್ (ಚಕ್ರವ್ಯೂಹ) ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ ಯಾವುದೇ ಪರಿಹಾರ ದೊರೆಯಲಿಲ್ಲ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.
ಟ್ರೈಲರ್‌ನಲ್ಲಿ ಅವರ ಧ್ವನಿ ಇಲ್ಲದಿರುವುದು ಪ್ರಜ್ವಲ್ ದೇವರಾಜ್ ಅವರಿಗೆ ಮೊದಲೇ ತಿಳಿದಿತ್ತು ಹಾಗೂ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ಮಾಹಿತಿಯನ್ನು ಅವರ ವ್ಯವಸ್ಥಾಪಕರ ಮೂಲಕ ತಿಳಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ಬಾಕಿ ಹಣ ಪಾವತಿಸಿದ ನಂತರವೂ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಮಾಧ್ಯಮಗಳಲ್ಲಿ ಅಪರಿಚಿತ ಖಾತೆಗಳ ಮೂಲಕ ಕರಾವಳಿ ಸಿನಿಮಾ, ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆಯ ವಿರುದ್ಧ ಸುಳ್ಳು ಆರೋಪಗಳು ಮತ್ತು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಸಂಸ್ಥೆ, ಈ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.