
ನವದೆಹಲಿ, 09 ಜೂನ್ (ಹಿ.ಸ.) :
ಆ್ಯಂಕರ್ : ಆದಿವಾಸಿ ಸಮುದಾಯದ ಮಹಾನಾಯಕ ಹಾಗೂ ‘ಧರ್ತಿ ಆಬಾ’ (ಭೂಮಿಯ ತಂದೆ) ಎಂದೇ ಪ್ರಸಿದ್ಧರಾಗಿರುವ ಭಗವಾನ್ ಬಿರ್ಸಾ ಮುಂಡಾ ಅವರ ಹುತಾತ್ಮ ದಿನದ ಅಂಗವಾಗಿ ದೇಶದಾದ್ಯಂತ ಗಣ್ಯರು, ರಾಜಕೀಯ ನಾಯಕರು ಮತ್ತು ವಿವಿಧ ಸಂಘಟನೆಗಳು ಅವರಿಗೆ ಗೌರವ ನಮನ ಸಲ್ಲಿಸಿವೆ. ಅವರ ಹೋರಾಟ, ತ್ಯಾಗ ಹಾಗೂ ಆದಿವಾಸಿಗಳ ಹಕ್ಕುಗಳ ರಕ್ಷಣೆಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡು, ಬಿರ್ಸಾ ಮುಂಡಾ ಅವರನ್ನು ಧೈರ್ಯ, ಸ್ವಾಭಿಮಾನ ಮತ್ತು ನ್ಯಾಯದ ಮೇಲಿನ ಅಚಲ ಬದ್ಧತೆಯ ಪ್ರತೀಕ ಎಂದು ಬಣ್ಣಿಸಿದರು. ಐತಿಹಾಸಿಕ ‘ಉಲ್ಗುಲಾನ್’ ಚಳವಳಿಯ ಮೂಲಕ ಅವರು ದಮನದ ವಿರುದ್ಧ ಪ್ರತಿರೋಧದ ಕಿಡಿ ಹಚ್ಚಿ, ಆದಿವಾಸಿ ಸಮುದಾಯವನ್ನು ತಮ್ಮ ಹಕ್ಕು, ಗುರುತು ಮತ್ತು ಗೌರವದ ರಕ್ಷಣೆಗೆ ಪ್ರೇರೇಪಿಸಿದರು ಎಂದು ಹೇಳಿದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಜಲ-ಜಂಗಲ್-ಜಮೀನ್ (ನೀರು, ಅರಣ್ಯ ಮತ್ತು ಭೂಮಿ) ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಜನನಾಯಕ ಬಿರ್ಸಾ ಮುಂಡಾ ಎಂದು ಸ್ಮರಿಸಿದರು. ಆದಿವಾಸಿ ಸಮುದಾಯದ ಸಾಂಸ್ಕೃತಿಕ ಅಸ್ತಿತ್ವ ಮತ್ತು ಹಕ್ಕುಗಳ ರಕ್ಷಣೆಗಾಗಿ ಅವರು ನಡೆಸಿದ ಹೋರಾಟವು ಭಾರತದ ಸ್ವಾತಂತ್ರ್ಯ ಚಳವಳಿಯ ಹೆಮ್ಮೆಯ ಅಧ್ಯಾಯವಾಗಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಉಲ್ಗುಲಾನ್ ಚಳವಳಿಯ ಮೂಲಕ ಬ್ರಿಟಿಷರ ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯದ ಶಂಖನಾದ ಮೊಳಗಿಸಿದ ನಾಯಕ ಬಿರ್ಸಾ ಮುಂಡಾ ಎಂದು ಶ್ಲಾಘಿಸಿದರು. ಆದಿವಾಸಿಗಳನ್ನು ಸಂಘಟಿಸಿ ತಮ್ಮ ಹಕ್ಕುಗಳು ಮತ್ತು ಪರಂಪರೆಯ ರಕ್ಷಣೆಗೆ ಪ್ರೇರೇಪಿಸಿದ ಅವರು, ಜಲ-ಜಂಗಲ್-ಜಮೀನ್ ಸಂರಕ್ಷಣೆಯನ್ನು ಜನಾಂದೋಲನವಾಗಿ ರೂಪಿಸಿದರು ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಕೊನೆಯ ಉಸಿರಿನವರೆಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕ ಎಂದು ಬಿರ್ಸಾ ಮುಂಡಾ ಅವರನ್ನು ಸ್ಮರಿಸಿದರು. ಅನ್ಯಾಯ, ಶೋಷಣೆ ಮತ್ತು ವಿದೇಶಿ ಆಡಳಿತದ ವಿರುದ್ಧದ ಅವರ ಹೋರಾಟ ಇಂದಿಗೂ ದೇಶಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಮನೋಹರ್ ಲಾಲ್ ಸೇರಿದಂತೆ ಹಲವು ನಾಯಕರು ಕೂಡ ಬಿರ್ಸಾ ಮುಂಡಾ ಅವರ ತ್ಯಾಗ, ರಾಷ್ಟ್ರಭಕ್ತಿ ಮತ್ತು ಸಮಾಜಸೇವೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು, ಬ್ರಿಟಿಷರ ವಿರುದ್ಧ ಬಿರ್ಸಾ ಮುಂಡಾ ನಡೆಸಿದ ಹೋರಾಟ ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಕೈಗೊಂಡ ಜನಜಾಗೃತಿ ಅಭಿಯಾನವು ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಅಧ್ಯಾಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಜಲ, ಜಂಗಲ್, ಜಮೀನ್ ಮತ್ತು ಆದಿವಾಸಿ ಅಸ್ತಿತ್ವದ ರಕ್ಷಣೆಗೆ ಬಿರ್ಸಾ ಮುಂಡಾ ಆರಂಭಿಸಿದ ಉಲ್ಗುಲಾನ್ ಚಳವಳಿ ಇಂದಿಗೂ ದೇಶದ ಜನತೆಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಆದಿವಾಸಿ ಹಕ್ಕುಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಿರ್ಸಾ ಮುಂಡಾ ಅವರ ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ಕೊಡುಗೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.
25ನೇ ವಯಸ್ಸಿನಲ್ಲೇ ಅಮರರಾದ ಮಹಾನಾಯಕ
1875ರ ನವೆಂಬರ್ 15ರಂದು ಜನಿಸಿದ ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಕೇವಲ 25ನೇ ವಯಸ್ಸಿನಲ್ಲಿ, 1900ರ ಜೂನ್ 9ರಂದು ರಾಂಚಿ ಜೈಲಿನಲ್ಲಿ ಬ್ರಿಟಿಷರ ಬಂಧನದಲ್ಲಿದ್ದಾಗ ಅವರು ಕೊನೆಯುಸಿರೆಳೆದರು. ‘ಧರ್ತಿ ಆಬಾ’ ಎಂಬ ಹೆಸರಿನಿಂದ ಜನಮನದಲ್ಲಿ ಅಜರಾಮರರಾಗಿರುವ ಬಿರ್ಸಾ ಮುಂಡಾ ಅವರ ಹೋರಾಟ ಮತ್ತು ಆದರ್ಶಗಳು ಇಂದಿಗೂ ದೇಶದ ಯುವಜನತೆಗೆ ಪ್ರೇರಣೆಯಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.