ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ
24 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ
Rescued


ನವದೆಹಲಿ, 09 ಜೂನ್ (ಹಿ.ಸ.) :

ಆ್ಯಂಕರ್ : ಒಮಾನ್ ಕರಾವಳಿಯ ಸಮೀಪ ವ್ಯಾಪಾರಿ ತೈಲ ಟ್ಯಾಂಕರ್ ಮೇಲೆ ನಡೆದ ಕ್ಷಿಪಣಿ ದಾಳಿಯ ಬಳಿಕ ಹಡಗಿನಲ್ಲಿ ಸಿಲುಕಿದ್ದ 24 ಭಾರತೀಯ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ , ಮುಂಬೈನ ಕಡಲ ಪಾರುಗಾಣಿಕಾ ಸಮನ್ವಯ ಕೇಂದ್ರ ಹಾಗೂ ಒಮಾನ್ನ ಕಡಲ ರಕ್ಷಣಾ ಸಂಸ್ಥೆಗಳ ಸಮನ್ವಯದ ಫಲವಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.

ಪಲಾವು ಧ್ವಜ ಹೊಂದಿದ್ದ ಎಂ.ಟಿ. ಮಾರಿವೆಕ್ಸ್ ಎಂಬ ಟ್ಯಾಂಕರ್ ಒಮಾನ್ನ ಮಸೀರಾ ಕರಾವಳಿ ಸಮೀಪ ಲಂಗರು ಹಾಕಿದ್ದ ವೇಳೆ ಕ್ಷಿಪಣಿ ದಾಳಿಗೆ ಒಳಗಾಗಿದೆ. ಜೂನ್ 8ರಂದು ಮಧ್ಯಾಹ್ನ ಸುಮಾರು 2.20 ಗಂಟೆಗೆ ಈ ಘಟನೆ ಕುರಿತು ಮಾಹಿತಿ ಮುಂಬೈನ ಎಂಆರ್ಸಿಸಿಗೆ ತಲುಪಿತು. ಹಡಗಿನಲ್ಲಿ ಒಟ್ಟು 24 ಸಿಬ್ಬಂದಿಗಳಿದ್ದು, ಎಲ್ಲರೂ ಭಾರತೀಯ ಪ್ರಜೆಗಳಾಗಿದ್ದರು.

ಹಡಗಿನಲ್ಲಿದ್ದ ಸಿಬ್ಬಂದಿಯೊಬ್ಬರ ಸಂಬಂಧಿಕರು ಎಂಆರ್ಸಿಸಿಗೆ ಮಾಹಿತಿ ನೀಡಿದ ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ಒಮಾನ್ನ ಕಡಲ ಹುಡುಕಾಟ ಮತ್ತು ರಕ್ಷಣಾ ಕೇಂದ್ರವನ್ನು ಸಂಪರ್ಕಿಸಿದರು. ಭಾರತೀಯ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಲು ತುರ್ತು ನೆರವು ನೀಡುವಂತೆ ಮನವಿ ಮಾಡಲಾಯಿತು.

ತಕ್ಷಣ ಕಾರ್ಯಪ್ರವೃತ್ತವಾದ ಒಮಾನ್ ಅಧಿಕಾರಿಗಳು ಸಮೀಪದಲ್ಲಿದ್ದ ಹಡಗನ್ನು ಘಟನಾ ಸ್ಥಳಕ್ಕೆ ಕಳುಹಿಸುವುದರ ಜೊತೆಗೆ ಎರಡು ರಕ್ಷಣಾ ಹೆಲಿಕಾಪ್ಟರ್ಗಳನ್ನು ನಿಯೋಜಿಸಿದರು. ಭಾರತೀಯ ಮತ್ತು ಒಮಾನಿ ಸಂಸ್ಥೆಗಳ ನಡುವೆ ನಿರಂತರ ಸಂಪರ್ಕ ಹಾಗೂ ಸಮನ್ವಯ ಮುಂದುವರಿದಿದ್ದು, ಸಂಜೆ ಸುಮಾರು 5 ಗಂಟೆಗೆ ಒಮಾನ್ ನೌಕಾಪಡೆಯ ಹೆಲಿಕಾಪ್ಟರ್ಗಳು ಎಲ್ಲಾ 24 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿರುವುದಾಗಿ ದೃಢಪಡಿಸಿವೆ.

ಭಾರತೀಯ ಕರಾವಳಿ ಕಾವಲು ಪಡೆಯ ಕಮಾಂಡೆಂಟ್ ಅಮಿತ್ ಉನಿಯಾಲ್ ಅವರ ಪ್ರಕಾರ, ಈ ಕಾರ್ಯಾಚರಣೆ ಭಾರತೀಯ ನಾವಿಕರ ಸುರಕ್ಷತೆಯತ್ತ ಭಾರತದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಭಾರತೀಯ ನಾವಿಕರಿಗೆ ಅಗತ್ಯ ನೆರವು ಒದಗಿಸಲು ಭಾರತ ಸದಾ ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಅಥವಾ ಸಾವುನೋವು ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರ ಭದ್ರತೆ ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆಗಳ ವಿಷಯದಲ್ಲಿ ಭಾರತ ಹಾಗೂ ಪ್ರಾದೇಶಿಕ ರಾಷ್ಟ್ರಗಳ ನಡುವಿನ ಬಲವಾದ ಸಹಕಾರಕ್ಕೂ ಈ ಕಾರ್ಯಾಚರಣೆ ಉತ್ತಮ ಉದಾಹರಣೆಯಾಗಿದೆ.

ಭಾರತೀಯ ಕರಾವಳಿ ಕಾವಲು ಪಡೆ, ಹಿಂದೂ ಮಹಾಸಾಗರದ ವಿಶಾಲ ಹುಡುಕಾಟ ಮತ್ತು ರಕ್ಷಣಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮುದ್ರದಲ್ಲಿರುವ ನಾವಿಕರ ಸುರಕ್ಷತೆ, ತುರ್ತು ಸಂದರ್ಭಗಳಲ್ಲಿ ತ್ವರಿತ ನೆರವು ಹಾಗೂ ಅಂತರರಾಷ್ಟ್ರೀಯ ಕಡಲ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಅದರ ಸಾಮರ್ಥ್ಯ ಮತ್ತು ಬದ್ಧತೆಗೆ ಮತ್ತೊಂದು ಸಾಕ್ಷಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande