ಪ್ರಧಾನಿ ಮೋದಿ ಆಡಳಿತ ಕೊಂಡಾಡಿದ ದೇವೇಗೌಡ ಮತ್ತು ಚಂದ್ರಬಾಬು ನಾಯ್ಡು
ನವದೆಹಲಿ, 09 ಜೂನ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದು 4,399 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಮ್ಮ ಲೇಖನಗಳ ಮೂಲಕ ಮೋದಿ ಅವ
ದೇವೇಗೌಡ


ಚಂದ್ರಬಾಬು ನಾಯ್ಡು


ನವದೆಹಲಿ, 09 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದು 4,399 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಮ್ಮ ಲೇಖನಗಳ ಮೂಲಕ ಮೋದಿ ಅವರ ನಾಯಕತ್ವ, ಆಡಳಿತ ಮಾದರಿ ಮತ್ತು ದೇಶದ ಅಭಿವೃದ್ಧಿ ಪಯಣವನ್ನು ಪ್ರಶಂಸಿಸಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಗೊಳ್ಳುವಿಕೆ, ತಾಂತ್ರಿಕ ಪ್ರಗತಿ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆ ಈ ಅವಧಿಯ ಪ್ರಮುಖ ಸಾಧನೆಗಳಾಗಿವೆ ಎಂದು ಇಬ್ಬರೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ತಮ್ಮ ಲೇಖನದಲ್ಲಿ ಪ್ರಧಾನಿ ಮೋದಿ ಅವರ ಆಡಳಿತಾವಧಿಯನ್ನು ಪ್ರಜಾಪ್ರಭುತ್ವದ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ.

ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಪ್ರಧಾನ ಮಂತ್ರಿಗಳಲ್ಲಿ ಮೋದಿ ಅವರು ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ನಾಯಕನಾಗಿದ್ದು, ಈ ಮೂಲಕ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ಬೆಳವಣಿಗೆಯನ್ನು ವಿವರಿಸಿದ ದೇವೇಗೌಡರು, 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 53 ರಾಜಕೀಯ ಪಕ್ಷಗಳು ಮತ್ತು ಸುಮಾರು 17 ಕೋಟಿ ಮತದಾರರಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ 2,593 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು ಎಂದು ತಿಳಿಸಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ವಿಸ್ತಾರ ಮತ್ತು ಜನಸಾಮಾನ್ಯರ ಹೆಚ್ಚಿದ ರಾಜಕೀಯ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಸಾಮಾಜಿಕ ಪ್ರಾತಿನಿಧ್ಯದ ದೃಷ್ಟಿಯಿಂದ ಹೆಚ್ಚು ಸಮಗ್ರವಾಗಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಸಚಿವ ಸಂಪುಟದಲ್ಲಿ ಇತರ ಹಿಂದುಳಿದ ವರ್ಗಗಳ 27 ಸಚಿವರು, ಪರಿಶಿಷ್ಟ ಜಾತಿಯ 10 ಸಚಿವರು ಹಾಗೂ ಪರಿಶಿಷ್ಟ ಪಂಗಡದ 5 ಸಚಿವರು ಸ್ಥಾನ ಪಡೆದಿರುವುದು ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರ ರಾಜಕೀಯ ಸಬಲೀಕರಣದ ನಿಟ್ಟಿನಲ್ಲಿ ನಾರಿ ಶಕ್ತಿ ವಂದನಾ ಕಾಯ್ದೆ ಐತಿಹಾಸಿಕ ಹೆಜ್ಜೆಯಾಗಿದ್ದು, ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಸಾರ್ವಜನಿಕ ಜೀವನದ ಟೀಕೆಗಳು ಹೆಚ್ಚು ವೈಯಕ್ತಿಕ ಹಾಗೂ ತೀಕ್ಷ್ಣವಾಗಿದ್ದರೂ, ಪ್ರಧಾನಿ ಮೋದಿ ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದು, ಮನದ ಮಾತು ಕಾರ್ಯಕ್ರಮದಂತಹ ವೇದಿಕೆಗಳ ಮೂಲಕ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸುತ್ತಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ ವಿಚಾರಗಳಲ್ಲಿ ಅವರ ದೃಢ ನಾಯಕತ್ವವನ್ನೂ ಅವರು ಶ್ಲಾಘಿಸಿದ್ದಾರೆ.

ಇದೇ ವೇಳೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಮ್ಮ ಲೇಖನದಲ್ಲಿ ಪ್ರಧಾನಿ ಮೋದಿ ಅವರ ರಾಷ್ಟ್ರ ಮೊದಲು ಮತ್ತು ಎಲ್ಲರ ಸಹಕಾರ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ ಎಂಬ ತತ್ವಗಳನ್ನು ಭಾರತದ ಅಭಿವೃದ್ಧಿಯ ಆಧಾರಸ್ತಂಭಗಳೆಂದು ಬಣ್ಣಿಸಿದ್ದಾರೆ.

ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ನಾಗರಿಕತೆಯ ಮೌಲ್ಯಗಳನ್ನು ಆಧುನಿಕ ಆಡಳಿತ ಮತ್ತು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಪ್ರಧಾನಿ ಮೋದಿ ಅವರು ಅಭಿವೃದ್ಧಿಯ ಹೊಸ ಮಾದರಿಯನ್ನು ದೇಶದ ಮುಂದೆ ಇಟ್ಟಿದ್ದಾರೆ ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 12 ವರ್ಷಗಳಲ್ಲಿ ಭಾರತವು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಿಂದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಜನಧನ್ ಯೋಜನೆ, ಆಧಾರ್ ಮತ್ತು ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಹಣಕಾಸು ಒಳಗೊಳ್ಳುವಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿವೆ ಎಂದು ಅವರು ತಿಳಿಸಿದ್ದಾರೆ.

ನೇರ ಲಾಭ ವರ್ಗಾವಣೆ ವ್ಯವಸ್ಥೆಯ ಮೂಲಕ ಲಕ್ಷಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ತಲುಪಿಸಲಾಗಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಿ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗಿದೆ ಎಂದು ನಾಯ್ಡು ಹೇಳಿದ್ದಾರೆ.

ಹೆದ್ದಾರಿಗಳು, ರೈಲ್ವೆ, ಬಂದರುಗಳು, ವಿಮಾನ ನಿಲ್ದಾಣಗಳು ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಬೃಹತ್ ಹೂಡಿಕೆಗಳು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸ್ಪರ್ಧಾತ್ಮಕ ಹಾಗೂ ಸಹಕಾರಿ ಒಕ್ಕೂಟ ವ್ಯವಸ್ಥೆಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯಕ್ಕೆ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಬೆಂಬಲದಿಂದ ಆಂಧ್ರಪ್ರದೇಶ ರಾಜ್ಯವು ಅಮರಾವತಿ ಅಭಿವೃದ್ಧಿ ಯೋಜನೆ, ಕೈಗಾರಿಕಾ ವಲಯದ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ನಾಯ್ಡು ತಿಳಿಸಿದ್ದಾರೆ.

ಇತಿಹಾಸವು ಈ ಅವಧಿಯನ್ನು ಕೇವಲ ಆರ್ಥಿಕ ಬೆಳವಣಿಗೆ ಅಥವಾ ರಾಜಕೀಯ ಸ್ಥಿರತೆಯ ಕಾಲಘಟ್ಟವಾಗಿ ಮಾತ್ರವಲ್ಲದೆ, ಭಾರತದ ಆತ್ಮವಿಶ್ವಾಸದ ಪುನರುತ್ಥಾನ, ಆಧುನಿಕ ಭಾರತದ ನಿರ್ಮಾಣ ಮತ್ತು ವಿಕಸಿತ ಭಾರತ–2047 ಸಂಕಲ್ಪದತ್ತ ದೇಶವನ್ನು ಮುನ್ನಡೆಸಿದ ಮಹತ್ವದ ಯುಗವಾಗಿ ನೆನಪಿಸಿಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮೋದಿ ಅವರ 12 ವರ್ಷಗಳ ಆಡಳಿತವು ಆತ್ಮನಿರ್ಭರ ಭಾರತ, ತಾಂತ್ರಿಕ ಪ್ರಗತಿ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಜಾಗತಿಕ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವದ ಪ್ರತೀಕವಾಗಿದೆ ಎಂದು ದೇವೇಗೌಡ ಮತ್ತು ಚಂದ್ರಬಾಬು ನಾಯ್ಡು ತಮ್ಮ ಲೇಖನಗಳಲ್ಲಿ ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ಈ ಅವಧಿಯು ಭಾರತದ ಅಭಿವೃದ್ಧಿ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದು, ದೇಶಕ್ಕೆ ಆತ್ಮವಿಶ್ವಾಸ, ಆಧುನಿಕತೆ ಮತ್ತು ಜಾಗತಿಕ ನಾಯಕತ್ವದ ಹೊಸ ದಿಕ್ಕನ್ನು ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande