
ನವದೆಹಲಿ, 08 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಸಾಗರ ದಿನದ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಗರಗಳ ಮಹತ್ವವನ್ನು ಒತ್ತಿಹೇಳುತ್ತಾ, ಸಮುದ್ರ ಜೀವವೈವಿಧ್ಯತೆಯ ರಕ್ಷಣೆ ಹಾಗೂ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಖರ್ಗೆ, ಸಾಗರಗಳು ನಮ್ಮ ಭೂಮಿಯ ಜೀವಾಳವಾಗಿದ್ದು, ನೀಲಿ ಆರ್ಥಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.
“ಈ ವಿಶ್ವ ಸಾಗರ ದಿನದಂದು, ಸಾಗರಗಳು ನಮಗೆ ಒದಗಿಸುವ ಅಸಂಖ್ಯಾತ ಪ್ರಯೋಜನಗಳನ್ನು ಗುರುತಿಸೋಣ. ಜೊತೆಗೆ, ಈ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಮತ್ತು ಸುಸ್ಥಿರವಾಗಿ ಬಳಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಮತ್ತೊಮ್ಮೆ ದೃಢಪಡಿಸೋಣ” ಎಂದು ಅವರು ತಿಳಿಸಿದ್ದಾರೆ.
ಮುಂಬರುವ ಪೀಳಿಗೆಯ ಭವಿಷ್ಯವು ಸಾಗರಗಳ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದು ಉಲ್ಲೇಖಿಸಿರುವ ಅವರು, ಸಮುದ್ರ ಪರಿಸರ ವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಸಮುದ್ರ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಹಾಗೂ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ಕೈಗೊಳ್ಳಬೇಕೆಂದು ಖರ್ಗೆ ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.