
ನವದೆಹಲಿ, 08 ಜೂನ್ (ಹಿ.ಸ.) :
ಆ್ಯಂಕರ್ : ಕಳೆದ 12 ವರ್ಷಗಳಲ್ಲಿ ಭಾರತವು ಹಲವು ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದ್ದು, ಈ ಬದಲಾವಣೆಗಳ ಮೂಲ ಉದ್ದೇಶ ಬಡವರು ಮತ್ತು ದೀನದಲಿತರ ಕಲ್ಯಾಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಪ್ರಧಾನಿ ಮೋದಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ‘ಅಂತ್ಯೋದಯ’ ತತ್ವವೇ ಪ್ರೇರಣೆಯಾಗಿದ್ದು, ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾಗಿದ್ದವರಿಗೂ ಅದರ ಪ್ರಯೋಜನಗಳು ತಲುಪುವಂತೆ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಜನಧನ್ ಖಾತೆಗಳು, ನೇರ ಲಾಭ ವರ್ಗಾವಣೆ (ಡಿಬಿಟಿ), ಸ್ವಚ್ಛ ಭಾರತ ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲ ಜೀವನ್ ಮಿಷನ್ ಹಾಗೂ ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ಯೋಜನೆಗಳು ಜನರಿಗೆ ಘನತೆಯುತ ಜೀವನ ಮತ್ತು ಹೊಸ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೊಂಡಿವೆ ಎಂದು ಅವರು ಹೇಳಿದ್ದಾರೆ.
ಬಡವರ ಜೀವನಮಟ್ಟ ಸುಧಾರಿಸುವಲ್ಲಿ ತಂತ್ರಜ್ಞಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನೇರ ಲಾಭ ವರ್ಗಾವಣೆ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಸರ್ಕಾರಿ ನೆರವು ಪಾರದರ್ಶಕವಾಗಿ ಹಾಗೂ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದೆ. ಇದರಿಂದ ಸೋರಿಕೆಗಳು ಕಡಿಮೆಯಾಗಿದ್ದು, ಆಡಳಿತದ ದಕ್ಷತೆ ಹೆಚ್ಚಳಗೊಂಡಿದೆ ಮತ್ತು ಜನರ ವಿಶ್ವಾಸ ಮತ್ತಷ್ಟು ಬಲಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
“ಗರೀಬ್ ಕಲ್ಯಾಣದ ಪಯಣವು ಕೇವಲ ಸರ್ಕಾರಿ ಕಾರ್ಯಕ್ರಮವಾಗಿರದೆ, ಮಾನವ ಸಬಲೀಕರಣದತ್ತ ಸಾಗುತ್ತಿರುವ ಒಂದು ಸಾಮೂಹಿಕ ಚಳುವಳಿಯಾಗಿ ರೂಪುಗೊಂಡಿದೆ. ವಿಕಸಿತ ಭಾರತದ ಕನಸನ್ನು ನನಸಾಗಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಳೆದ 12 ವರ್ಷಗಳ ಆಡಳಿತದಲ್ಲಿ ಬಡವರು, ರೈತರು, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.