
ಕೊಚ್ಚಿ, 07 ಜೂನ್ (ಹಿ.ಸ.) :
ಆ್ಯಂಕರ್ : ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಹಾಗೂ ಬಹುಮುಖ ಪ್ರತಿಭೆಯ ನಟ ಸಲೀಂ ಕುಮಾರ್ ಅವರು ಶನಿವಾರ ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ಶನಿವಾರ ಬೆಳಿಗ್ಗೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಸಲೀಂ ಕುಮಾರ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಅವರು ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ರಾತ್ರಿ ಸುಮಾರು 10.43ಕ್ಕೆ ಅವರು ನಿಧನರಾದರು.
ಮಿಮಿಕ್ರಿ ಮತ್ತು ಹಾಸ್ಯ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಸಲೀಂ ಕುಮಾರ್, 1990ರ ದಶಕದ ಕೊನೆಯಲ್ಲಿ ಚಿತ್ರರಂಗ ಪ್ರವೇಶಿಸಿದರು. 1997ರಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟ ಅವರು, ತಮ್ಮ ವಿಶಿಷ್ಟ ಹಾಸ್ಯ ಶೈಲಿಯಿಂದ ಅಲ್ಪಾವಧಿಯಲ್ಲೇ ಮಲಯಾಳಂ ಸಿನಿಪ್ರಿಯರ ಮನಗೆದ್ದರು. ಬಳಿಕ ಹಾಸ್ಯ ಪಾತ್ರಗಳ ಜೊತೆಗೆ ಗಂಭೀರ ಹಾಗೂ ಭಾವನಾತ್ಮಕ ಪಾತ್ರಗಳಲ್ಲಿಯೂ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
‘ಅಚನುರಂಗತ್ತ ವೀಡು’ ಚಿತ್ರದಲ್ಲಿನ ಅಭಿನಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ದ್ವಿತೀಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದ ಅವರು, 2010ರಲ್ಲಿ ಬಿಡುಗಡೆಯಾದ ‘ಆದಮಿಂಟೆ ಮಗನ್ ಅಬು’ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಚಿತ್ರವು ಭಾರತದ ಅಧಿಕೃತ ಆಸ್ಕರ್ ನಾಮನಿರ್ದೇಶನಕ್ಕೂ ಆಯ್ಕೆಯಾಗಿದ್ದು, ಸಲೀಂ ಕುಮಾರ್ ಅವರ ಪ್ರತಿಭೆಗೆ ಅಂತಾರಾಷ್ಟ್ರೀಯ ಮಟ್ಟದ ಮೆಚ್ಚುಗೆಯನ್ನು ತಂದುಕೊಟ್ಟಿತ್ತು.
ಸುಮಾರು ಮೂರು ದಶಕಗಳ ಸಿನಿ ಜೀವನದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ಸಲೀಂ ಕುಮಾರ್, ಮಲಯಾಳಂ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಸಂತಾಪ ಸೂಚಿಸಿ, “ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಭಾರತೀಯ ಸಿನಿರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ ಅಪರೂಪದ ಕಲಾವಿದ ಸಲೀಂ ಕುಮಾರ್. ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ” ಎಂದು ಹೇಳಿದ್ದಾರೆ.
ಸಲೀಂ ಕುಮಾರ್ ಅವರ ಅಗಲಿಕೆಯಿಂದ ಮಲಯಾಳಂ ಚಿತ್ರರಂಗ ಒಬ್ಬ ಅಪರೂಪದ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಪತ್ನಿ ಸುನೀತಾ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.