ಮುಂಗಾರು ಅಬ್ಬರಕ್ಕೆ ನಲುಗಿದ ಕರ್ನಾಟಕ
ಆಸ್ಪತ್ರೆ, ಪೊಲೀಸ್ ಠಾಣೆ, ಶಾಲೆಗಳಿಗೆ ನೀರು; ಹಲವೆಡೆ ಕಟ್ಟಡ ಕುಸಿತ, ಜನಜೀವನ ಅಸ್ತವ್ಯಸ್ತ
Rain photo


ಬೆಂಗಳೂರು, 07 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯಕ್ಕೆ ಮುಂಗಾರು ಅಧಿಕೃತವಾಗಿ ಪ್ರವೇಶ ಪಡೆದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಆರ್ಭಟ ಮುಂದುವರಿದಿದೆ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಲೆನಾಡು ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸರ್ಕಾರಿ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಶಾಲೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ರಸ್ತೆ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗಿದೆ.

ಬಳ್ಳಾರಿ ನಗರದಲ್ಲಿ ರಾತ್ರಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳ ಮನೆಗಳಿಗೆ ಚರಂಡಿ ಹಾಗೂ ಕಾಲುವೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೀಡಾದರು. ಪ್ರಮುಖ ದ್ವಿಚಕ್ರ ವಾಹನ ಶೋರೂಮ್ನ ನೆಲಮಹಡಿಗೆ ಮಳೆನೀರು ನುಗ್ಗಿ ನೂರಾರು ಬೈಕ್ಗಳು ಹಾಗೂ ಜನರೇಟರ್ ನೀರಿನಲ್ಲಿ ಮುಳುಗಿದವು. ಇನ್ಫೆಂಟ್ರಿ ರಸ್ತೆ, ರಾಣಿ ತೋಟ ಹಾಗೂ ಕನೇಕಲ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ನವನಗರ ಪ್ರದೇಶದ ರಸ್ತೆಗಳು ಕೆರೆಯಂತಾಗಿವೆ. ಜಿಲ್ಲಾ ಕ್ರೀಡಾಂಗಣದ ಬಳಿಯ ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮುಖ್ಯ ರಸ್ತೆಯೇ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ದೈನಂದಿನ ಬದುಕಿಗೂ ತೊಂದರೆಯಾಗಿದೆ.

ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದ ಬಳಿ ಹಳ್ಳ ತುಂಬಿ ಹರಿದ ಪರಿಣಾಮ ಮನೆಗಳು, ಅಂಗಡಿಗಳು ಹಾಗೂ ಮೈಲಾರಲಿಂಗೇಶ್ವರ ದೇವರ ಕಟ್ಟೆಗೆ ನೀರು ನುಗ್ಗಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಆವರಣ ಮತ್ತು ಒಳಭಾಗಕ್ಕೂ ಚರಂಡಿ ನೀರು ನುಗ್ಗಿದ್ದು, ಕಡತಗಳನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ತಗ್ಗು ಪ್ರದೇಶಗಳು, ಕಾಲುವೆಗಳು ಮತ್ತು ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಬೃಹತ್ ಮರವೊಂದು ಧರೆಗುರುಳಿ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಎರಡಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದೆ. ಖಾಸಗಿ ಕಚೇರಿಯಾಗಿ ಬಳಸಲಾಗುತ್ತಿದ್ದ ಕಟ್ಟಡ ಕುಸಿಯುವ ವೇಳೆ ಒಳಗೆ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

ಗದಗ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ತಿಲಕ್ ಪಾರ್ಕ್ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಕೆರೆಯಂತಾಗಿವೆ. ಚರಂಡಿಗಳು ತುಂಬಿ ಕಲುಷಿತ ನೀರು ರಸ್ತೆ ಮೇಲೆ ಹರಿದ ಪರಿಣಾಮ ವ್ಯಾಪಾರಸ್ಥರು, ವಾಹನ ಸವಾರರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸಿದರು.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಡವಿಬಾವಿ ತಾಂಡ ಗ್ರಾಮದ ಸರ್ಕಾರಿ ಶಾಲೆಗೆ ಮಳೆನೀರು ನುಗ್ಗಿದ್ದು, ಶಾಲೆಯ ಮುಂಭಾಗದ ರಸ್ತೆಯೂ ಜಲಾವೃತಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಆಸ್ಪತ್ರೆಯ ಕಟ್ಟಡ ಮಳೆಗೆ ಸೋರುತ್ತಿದ್ದು, ರೋಗಿಗಳು ಮತ್ತು ಸಿಬ್ಬಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮುಂಗಾರು ಮಳೆಯು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದರೂ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಳೆಯ ಅವಾಂತರಗಳು ಆಡಳಿತದ ಸಿದ್ಧತೆಯ ಕೊರತೆಯನ್ನು ಬಯಲಿಗೆಳೆದಿವೆ. ಮಳೆ ಹಾನಿ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande