
ಬೆಂಗಳೂರು, 07 ಜೂನ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರ ಜೀವನಾಧಾರಿತ ಹಿಂದಿ ನಾಟಕ ‘ಯುಗ ಪ್ರವರ್ತಕ ಡಾ. ಹೆಡಗೇವಾರ್’ ಬೆಂಗಳೂರಿನ ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಸಂಜೆ ಯಶಸ್ವಿಯಾಗಿ ಪ್ರದರ್ಶಿತಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮಹಾರಾಷ್ಟ್ರದ ನಾಗ್ಪುರ ಮೂಲದ ನಾದಬ್ರಹ್ಮ ತಂಡವು ರವೀಂದ್ರ ಸಹಸ್ರಬುದ್ಧೆ ಅವರ ನೇತೃತ್ವದಲ್ಲಿ ಈ ನಾಟಕವನ್ನು ರಂಗಸ್ಥಳಕ್ಕೆ ತಂದಿತ್ತು. ಸಂಘದ ಸಂಸ್ಥಾಪಕ ಡಾ. ಹೆಡಗೇವಾರ್ ಅವರ ಜೀವನ, ಚಿಂತನೆಗಳು ಹಾಗೂ ರಾಷ್ಟ್ರನಿರ್ಮಾಣದ ದೃಷ್ಟಿಕೋನವನ್ನು ನಾಟಕದ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲಾಯಿತು.
ಹಿರಿಯ ರಂಗಕಲಾವಿದ ಸತೀಶ್ ಕೆಖಾಳೆ ಅವರು ಡಾ. ಹೆಡಗೇವಾರ್ ಅವರ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಿದ್ದು, ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆ ಗಳಿಸಿದರು. ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ನಾಟಕ ವೀಕ್ಷಿಸಿ ಕಲಾವಿದರ ಅಭಿನಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ನಾಟಕದ ಮತ್ತೊಂದು ಪ್ರದರ್ಶನವು ಇಂದು ಸಂಜೆ ಬೆಂಗಳೂರಿನ ಕಾಡುಬೀಸನಹಳ್ಳಿಯ ಕಾವೇರಪ್ಪ ಲೇಔಟ್ನಲ್ಲಿರುವ ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆವರಣದಲ್ಲಿ ನಡೆಯಲಿದೆ. ಸಂಘದ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಡಾ. ಹೆಡಗೇವಾರ್ ಅವರ ಜೀವನ ಸಂದೇಶವನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ನಾಟಕವು ಈಗಾಗಲೇ ವಿವಿಧ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಬೆಂಗಳೂರಿನ ಪ್ರದರ್ಶನಗಳೂ ಅದೇ ರೀತಿಯ ಸ್ಪಂದನೆ ಪಡೆಯುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.